ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಕೆಲವರು ಯೆಹೋವನ ಸಾಕ್ಷಿಗಳ ವಿರುದ್ಧವಾಗಿ ಮಾತಾಡುವುದೇಕೆ?

ಹೆಚ್ಚಿನವರಿಗೆ ಅವರ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು ಒಂದು ಕಾರಣ. ಇನ್ನೂ ಕೆಲವರು, ಬೈಬಲ್‌ ಬಗ್ಗೆ ಇತರರಿಗೆ ತಿಳಿಸುವ ಅವರ ಕೆಲಸವನ್ನು ಇಷ್ಟಪಡುವುದಿಲ್ಲ. ಆದರೆ ವಾಸ್ತವದಲ್ಲಿ ಯೆಹೋವನ ಸಾಕ್ಷಿಗಳು ಆ ಕೆಲಸವನ್ನು ಮಾಡುವುದು ನೆರೆಯವರ ಮೇಲಣ ಪ್ರೀತಿಯಿಂದಾಗಿ. ಏಕೆಂದರೆ, “ಯೆಹೋವನ ನಾಮದಲ್ಲಿ ಕೋರುವ ಪ್ರತಿಯೊಬ್ಬನೂ ರಕ್ಷಿಸಲ್ಪಡುವನು” ಎಂದು ಅವರಿಗೆ ತಿಳಿದಿದೆ.—ರೋಮನ್ನರಿಗೆ 10:13.

ಯೆಹೋವನ ಸಾಕ್ಷಿಗಳು ಪ್ರಾಟೆಸ್ಟೆಂಟರೊ? ಒಂದು ಚರ್ಚಿನ ಒಳಪಂಗಡವೊ? ಇಲ್ಲವೆ ಚರ್ಚಿನಿಂದ ಬೇರ್ಪಟ್ಟಿರುವ ಒಂದು ಭಿನ್ನಪಂಥವೊ?

ಯೆಹೋವನ ಸಾಕ್ಷಿಗಳು ಪ್ರಾಟೆಸ್ಟಂಟರು ಅಲ್ಲ. ಹಾಗಂತ ಕ್ಯಾಥೊಲಿಕರೂ ಅಲ್ಲ. ಏಕೆಂದರೆ ಆ ಧರ್ಮಗಳ ಕೆಲವೊಂದು ಬೋಧನೆಗಳು ಬೈಬಲಾಧಾರಿತವಲ್ಲ ಎಂದವರು ಗ್ರಹಿಸಿದ್ದಾರೆ. ಉದಾಹರಣೆಗೆ, ದೇವರು ಜನರನ್ನು ನರಕದ ಬೆಂಕಿಯಲ್ಲಿ ಅನಂತ ಯಾತನೆಗೆ ಒಳಪಡಿಸುತ್ತಾನೆ ಎಂಬುದು ಬೈಬಲ್‌ ಬೋಧನೆಯಲ್ಲ. ಪ್ರೀತಿಸ್ವರೂಪಿಯಾದ ದೇವರು ಹಾಗೆಂದೂ ಮಾಡನು. ಮಾನವರೊಳಗೆ ಅಮರ ಆತ್ಮ ಇದೆ ಎಂದೂ ಬೈಬಲ್‌ ಬೋಧಿಸುವುದಿಲ್ಲ.—ಪ್ರಸಂಗಿ 9:5, 10; ರೋಮನ್ನರಿಗೆ 6:23. *

ಆದರೆ ಯೆಹೋವನ ಸಾಕ್ಷಿಗಳು ಕ್ರೈಸ್ತರು (ಕ್ರಿಶ್ಚನರು) ಹೌದು. ಏಕೆಂದರೆ ಅವರು ದಿನನಿತ್ಯದ ಜೀವನದಲ್ಲಿ ಯೇಸು ಕ್ರಿಸ್ತನನ್ನು ಅನುಕರಿಸುತ್ತಾರೆ. ಉದಾಹರಣೆಗೆ ಯೇಸು ಕ್ರಿಸ್ತನು ಮತ್ತು ಆದಿ ಕ್ರೈಸ್ತರು ರಾಜಕೀಯ ವಿಷಯಗಳಲ್ಲಿ ತಲೆಹಾಕಲಿಲ್ಲ. ಬದಲಾಗಿ ಅವರು ದೇವರ ಸರಕಾರದ ಕುರಿತಾಗಿ ಸಾರಿದರು. (ಲೂಕ 4:43; ಯೋಹಾನ 15:19; 17:14) ಅವರ ಮಾದರಿಯನ್ನು ಅನುಸರಿಸುತ್ತಾ ಯೆಹೋವನ ಸಾಕ್ಷಿಗಳು ರಾಜಕೀಯ ವಿಷಯಗಳಿಂದ ದೂರವಿರುತ್ತಾರೆ. ಅಲ್ಲದೆ, ಅವರು ಜನರೊಟ್ಟಿಗೆ ವೈಯಕ್ತಿಕವಾಗಿ ಮಾತಾಡುವಾಗ ಆದಿ ಕ್ರೈಸ್ತರು ಮಾಡಿದಂತೆ ತರ್ಕವನ್ನು ಬಳಸಿ, ಆಧಾರಗಳನ್ನು ನೀಡುತ್ತಾರೆ. —ಅ. ಕಾರ್ಯಗಳು 19:8.

ಒಳಪಂಗಡ ಅಂದರೆ ಒಂದು ಧಾರ್ಮಿಕ ಮತದೊಳಗೆ ಇರುವ ಒಂದು ಭಿನ್ನಮತೀಯ ಗುಂಪು. ಯೆಹೋವನ ಸಾಕ್ಷಿಗಳು ಯಾವುದೇ ಚರ್ಚಿನ ಒಳಪಂಗಡವಲ್ಲ ಏಕೆಂದರೆ ಅವರಿಗೂ ಚರ್ಚಿಗೂ ಯಾವುದೇ ಸಂಬಂಧವಿಲ್ಲ. ಈ ಕಾರಣದಿಂದಲೇ ಅವರು ಒಂದು ಹೊಸ ಧರ್ಮ ಆರಂಭಿಸಲಿಕ್ಕೆಂದು ಚರ್ಚಿನಿಂದ ಬೇರ್ಪಟ್ಟಿರುವ ಗುಂಪೆಂದೂ ಹೇಳಸಾಧ್ಯವಿಲ್ಲ.

ಅವರ ಕೂಟಗಳಲ್ಲಿ ಏನು ನಡೆಯುತ್ತದೆ?

ಸಾರ್ವಜನಿಕರೂ ಅವರ ಕೂಟಗಳಿಗೆ ಹಾಜರಾಗಬಹುದು. ಈ ಕೂಟಗಳು ಮುಖ್ಯವಾಗಿ ಬೈಬಲಿನ ಕುರಿತ ಅಧ್ಯಯನಗಳಾಗಿವೆ. ಹೆಚ್ಚಿನ ಕೂಟಗಳಲ್ಲಿ ಸಭಿಕರೂ ಭಾಗವಹಿಸುತ್ತಾರೆ. ವಾರದ ಒಂದು ಕೂಟ ‘ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ’ ಎಂದಾಗಿದೆ. ಇದು ಸಭಾ ಸದಸ್ಯರಿಗೆ ತಮ್ಮ ಬೋಧನಾ, ವಾಚನ, ಸಂಶೋಧನಾ ಕಲೆಗಳನ್ನು ವಿಕಸಿಸುವಂತೆ ಸಹಾಯಮಾಡುತ್ತದೆ. ಇನ್ನೊಂದು ಕೂಟ 30-ನಿಮಿಷಗಳ ಬೈಬಲಾಧಾರಿತ ಭಾಷಣ ಆಗಿದೆ. ಭಾಷಣವು ವಿಶೇಷವಾಗಿ ಸಾರ್ವಜನಿಕರಿಗೆ ಆಸಕ್ತಿಕರವಾಗಿರುವ ವಿಷಯದ ಮೇಲಿರುತ್ತದೆ. ಸಾಮಾನ್ಯವಾಗಿ ಇದರ ನಂತರ ಕಾವಲಿನಬುರುಜು ಪತ್ರಿಕೆ ಬಳಸಿ ಬೈಬಲಿನ ಅಧ್ಯಯನ ನಡೆಸಲಾಗುತ್ತದೆ. ಕೂಟಗಳ ಆರಂಭ ಮತ್ತು ಅಂತ್ಯದಲ್ಲಿ ಗೀತೆ ಹಾಗೂ ಪ್ರಾರ್ಥನೆ ಇರುತ್ತದೆ. ಈ ಕೂಟಗಳಲ್ಲಿ ಹಣಕೊಡುವಂತೆ ಯಾವುದೇ ಒತ್ತಾಯಪೂರ್ವಕ ಮನವಿಗಳಿರುವುದಿಲ್ಲ ಅಥವಾ ಕಾಣಿಕೆ ತಟ್ಟೆಯನ್ನು ದಾಟಿಸಿ ಹಣಸಂಗ್ರಹಿಸಲ್ಪಡುವುದಿಲ್ಲ.—2 ಕೊರಿಂಥ 8:12.

ಯೆಹೋವನ ಸಾಕ್ಷಿಗಳ ಕೆಲಸಕ್ಕೆ ಹಣ ಎಲ್ಲಿಂದ ಬರುತ್ತದೆ?

ಅವರ ಕೆಲಸ ಸ್ವಯಂಪ್ರೇರಿತ ಕಾಣಿಕೆಗಳಿಂದ ನಡೆಯುತ್ತದೆ. ದೀಕ್ಷಾಸ್ನಾನ, ಮದುವೆ, ಶವಸಂಸ್ಕಾರ ಇಲ್ಲವೇ ಬೇರಾವುದೇ ಧಾರ್ಮಿಕ ಸೇವೆಗಾಗಿ ಯೆಹೋವನ ಸಾಕ್ಷಿಗಳು ಹಣ ತೆಗೆದುಕೊಳ್ಳುವುದಿಲ್ಲ. ಆದಾಯದಲ್ಲಿ ನಿಗದಿತ ಮೊತ್ತವನ್ನು ಕೊಡುವ ಪದ್ಧತಿಯೂ ಅವರಲ್ಲಿಲ್ಲ. ಹಣ ದಾನಮಾಡಲು ಇಚ್ಛಿಸುವವರು ಅದನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಬಹುದು. ಈ ಪೆಟ್ಟಿಗೆಯನ್ನು ಅವರ ಕೂಟಗಳ ಸ್ಥಳವಾದ ರಾಜ್ಯ ಸಭಾಗೃಹದಲ್ಲಿ ಎದ್ದುಕಾಣದಂಥ ಒಂದು ಸ್ಥಳದಲ್ಲಿ ಇಡಲಾಗುತ್ತದೆ. ವೆಚ್ಚಗಳನ್ನು ಆದಷ್ಟು ಕಡಿಮೆಮಾಡುವ ನಿಟ್ಟಿನಲ್ಲಿ ಯೆಹೋವನ ಸಾಕ್ಷಿಗಳ ಬೈಬಲ್‌ ಸಾಹಿತ್ಯವನ್ನು ಸ್ವತಃ ಅವರೇ ಮುದ್ರಿಸುತ್ತಾರೆ ಮತ್ತು ಅವರ ಸರಳವಾದ ರಾಜ್ಯ ಸಭಾಗೃಹಗಳಲ್ಲಿ ಮತ್ತು ಬ್ರಾಂಚ್‌ ಆಫೀಸಿನ ಕಟ್ಟಡಗಳಲ್ಲಿ ಹೆಚ್ಚಿನವುಗಳನ್ನು ಸ್ವಯಂಸೇವಕರೇ ನಿರ್ಮಿಸುತ್ತಾರೆ.

ಯೆಹೋವನ ಸಾಕ್ಷಿಗಳು ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುತ್ತಾರೋ?

ಹೌದು. ತಮಗೂ ತಮ್ಮ ಕುಟುಂಬದವರಿಗೂ ಅತ್ಯುತ್ತಮ ಔಷಧೋಪಚಾರ ಸಿಗುವಂತೆ ನೋಡಿಕೊಳ್ಳುತ್ತಾರೆ. ಅಷ್ಟುಮಾತ್ರವಲ್ಲ ಯೆಹೋವನ ಸಾಕ್ಷಿಗಳಲ್ಲಿ ಅನೇಕರು ವೈದ್ಯಕೀಯ ಕ್ಷೇತ್ರದಲ್ಲಿ ನರ್ಸುಗಳು, ವೈದ್ಯ ಸಹಾಯಕರು, ಡಾಕ್ಟರರು ಹಾಗೂ ಶಸ್ತ್ರಚಿಕಿತ್ಸಕರಾಗಿ ಕೆಲಸಮಾಡುತ್ತಾರೆ. ಆದರೆ ಯೆಹೋವನ ಸಾಕ್ಷಿಗಳು ರಕ್ತಪೂರಣವನ್ನು ಮಾತ್ರ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ‘ರಕ್ತವನ್ನು ವರ್ಜಿಸಿರಿ’ ಎನ್ನುತ್ತದೆ ಬೈಬಲ್‌. (ಅ. ಕಾರ್ಯಗಳು 15:28, 29) ಸ್ವಾರಸ್ಯಕರ ಸಂಗತಿಯೇನೆಂದರೆ, ಈಗೀಗ ಹೆಚ್ಚೆಚ್ಚು ಮಂದಿ ವೈದ್ಯರು ರಕ್ತರಹಿತ ವೈದ್ಯಕೀಯ ಔಷಧೋಪಚಾರವನ್ನು ಅತ್ಯುತ್ತಮ ಚಿಕಿತ್ಸೆ ಎಂದು ಪರಿಗಣಿಸುತ್ತಿದ್ದಾರೆ. ಏಕೆಂದರೆ ಇಂಥ ಚಿಕಿತ್ಸೆಯ ಮೂಲಕ, ರಕ್ತದ ಉತ್ಪನ್ನಗಳ ಬಳಕೆಯಿಂದ ಆರೋಗ್ಯಕ್ಕಾಗುವ ಅಪಾಯಗಳನ್ನು ತಡೆಗಟ್ಟಸಾಧ್ಯವಿದೆ. (g10-E 08)

[ಪಾದಟಿಪ್ಪಣಿ]

^ ಈ ವಿಷಯಗಳ ಬಗ್ಗೆ ಹಾಗೂ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಬೈಬಲಿನ ನೋಟವೇನೆಂದು ತಿಳಿಯಲು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕ ನೋಡಿ.

[ಪುಟ 11ರಲ್ಲಿರುವ ಚೌಕ/ಚಿತ್ರ]

ಇಲ್ಲಿ ಸಹಿಷ್ಣುತೆ ಮೆರೆಯುತ್ತದೆ

ದಕ್ಷಿಣ ಮೆಕ್ಸಿಕೊದಲ್ಲಿರುವ ಬೆಜುಕಾಲ್‌ ಡೀ ಓಕಾಂಪೊ ಪಟ್ಟಣವು ಬೇರೆಲ್ಲ ಪಟ್ಟಣಗಳಿಗಿಂತ ಸ್ವಲ್ಪ ಭಿನ್ನ. “ಇಲ್ಲಿನ ನಿವಾಸಿಗಳಲ್ಲಿ ಅಧಿಕಾಂಶ ಮಂದಿ ಯೆಹೋವನ ಸಾಕ್ಷಿಗಳು” ಎನ್ನುತ್ತದೆ ಎಕ್ಸಲ್‌ಸ್ಯರ್‌ ಎಂಬ ವಾರ್ತಾಪತ್ರಿಕೆಯ ವರದಿ. ಅದು ಮುಂದುವರಿಸಿದ್ದು: “ಇಲ್ಲಿ ಧಾರ್ಮಿಕ ಹಾಗೂ ಸರಕಾರೀ ಸಹಿಷ್ಣುತೆ ಮೆರೆಯುತ್ತದೆ. . . . ಇಲ್ಲಿನ ನಿವಾಸಿಗಳು ಈಗ ಕುಡಿಯುವುದಿಲ್ಲ, ಸಿಗರೇಟ್‌ ಸೇದುವುದಿಲ್ಲ. ಬದಲಾಗಿ ಗೀತೆಗಳನ್ನು ಹಾಡುತ್ತಾರೆ ಮತ್ತು ಬೈಬಲ್‌ ವಾಚನ ಮಾಡುತ್ತಾರೆ. ಅವರು ಅಧಿಕಾರಿಗಳಿಗೂ ಗೌರವ ತೋರಿಸುತ್ತಾರೆ.”

ಆ ಪಟ್ಟಣದಲ್ಲಿ ಭಿನ್ನಭಿನ್ನ ಧರ್ಮದವರು ಇದ್ದರೂ, “ಧಾರ್ಮಿಕ ಗಲಭೆ ಇಲ್ಲವೆ ವಿವಾದಗಳು ಎಂದೂ ನಡೆದಿಲ್ಲ” ಎನ್ನುತ್ತದೆ ಆ ವರದಿ. ಅದು ಮತ್ತೂ ಹೇಳಿದ್ದು: “ಇಲ್ಲಿ ವೈರಕ್ಕೆ ಎಡೆಯೇ ಇಲ್ಲ. ಬೇರೆ ಧರ್ಮದವರು ಎಂಬ ಕಾರಣಕ್ಕಾಗಿ ನೆರೆಯವರು ಪರಸ್ಪರರನ್ನು ವಂದಿಸದೇ ಇರುವುದಿಲ್ಲ . . . ಪ್ರತಿಯೊಂದು ಕುಟುಂಬವೂ ಭಯವಿಲ್ಲದೆ ತನ್ನ ಧರ್ಮವನ್ನು ಪಾಲಿಸುತ್ತದೆ. ಎಲ್ಲರೂ ಸಾಮರಸ್ಯದಿಂದ ಜೀವಿಸುವುದಕ್ಕೆ ಇದು ಯಾವುದೇ ಅಡ್ಡಿ ತಂದಿಲ್ಲ. ಹಾಗಾಗಿ ಬೆಜುಕಾಲ್‌ನಲ್ಲಿ ಯೆಹೋವನ ಸಾಕ್ಷಿಗಳ ಸಂಖ್ಯೆ ಹೆಚ್ಚಿರುವುದು ಅಚ್ಚರಿಯ ಸಂಗತಿಯಲ್ಲ.” ಅಲ್ಲದೆ, ಅಲ್ಲಿನ ಪ್ರೌಢಶಾಲೆಯ ಶಿಕ್ಷಕನು ಹೇಳಿದ್ದೇನೆಂದರೆ ಅವರ ಮಕ್ಕಳ ‘ಬಟ್ಟೆಬರೆ ಸಭ್ಯವಾಗಿರುತ್ತದೆ, ಅಂಕಗಳು ಉತ್ತಮವಾಗಿರುತ್ತವೆ ಮತ್ತು ತರಗತಿಯಲ್ಲಿ ಅವರ ನಡವಳಿಕೆ ಒಳ್ಳೇದಾಗಿರುತ್ತದೆ.’ ಹೀಗೆಂದು ಯೆಹೋವನ ಸಾಕ್ಷಿಯಲ್ಲದ ಈತ ಪ್ರಶಂಸಿಸಿದ.