ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಶೀರ್ವಾದ ಪಡೆಯೋದು ಹೇಗೆ—ಪ್ರವಾದಿಗಳಿಂದ ಕಲಿಯಿರಿ

ಆಶೀರ್ವಾದ ಪಡೆಯೋದು ಹೇಗೆ—ಪ್ರವಾದಿಗಳಿಂದ ಕಲಿಯಿರಿ

ಹಿಂದಿನ ಕಾಲದಲ್ಲಿ ದೇವರು ತನ್ನ ಪ್ರವಾದಿಗಳ ಮೂಲಕ ಮುಖ್ಯ ಸಂದೇಶಗಳನ್ನ ತಿಳಿಸಿದ. ಈ ಸಂದೇಶಗಳ ಬಗ್ಗೆ ತಿಳುಕೊಂಡ್ರೆ ದೇವರ ಆಶೀರ್ವಾದ ಹೇಗೆ ಪಡಕೊಳ್ಳಬಹುದು ಅಂತ ಗೊತ್ತಾಗುತ್ತೆ. ಬನ್ನಿ ದೇವರ ಆಶೀರ್ವಾದ ಪಡೆಯಲು ನಾವೇನು ಮಾಡಬೇಕಂತ ಮೂವರು ಪ್ರವಾದಿಗಳು ಬರೆದಿರೋ ವಿಷಯ ನೋಡೋಣ.

ಅಬ್ರಹಾಮ

ದೇವರು ಭೇದ-ಭಾವ ಮಾಡಲ್ಲ ಮತ್ತು ಎಲ್ಲಾ ಮನುಷ್ಯರಿಗೆ ಆಶೀರ್ವಾದ ಸಿಗಬೇಕಂತ ಬಯಸ್ತಾನೆ.

ದೇವರು ಪ್ರವಾದಿಯಾದ ಅಬ್ರಹಾಮನಿಗೆ “ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು” ಅಂತ ಮಾತು ಕೊಟ್ಟನು.—ಆದಿಕಾಂಡ 12:3.

ನಾವೇನು ಕಲಿಬಹುದು? ದೇವರು ನಮ್ಮನ್ನ ತುಂಬಾ ಪ್ರೀತಿಸ್ತಾನೆ. ಅಷ್ಟೇ ಅಲ್ಲ, ದೇವರ ಮಾತನ್ನ ಕೇಳೋ ಎಲ್ಲರನ್ನ ಆಶೀರ್ವದಿಸುತ್ತಾನೆ. ಗಂಡಸರು, ಹೆಂಗಸರು, ಮಕ್ಕಳು ಅನ್ನೋ ಭೇದ-ಭಾವ ಮಾಡಲ್ಲ.

ಮೋಶೆ

ದೇವರು ಕರುಣಾಮಯಿ ಮತ್ತು ತನ್ನ ಬಗ್ಗೆ ತಿಳುಕೊಳ್ಳೋಕೆ ಇಷ್ಟಪಡೋ ಎಲ್ಲರನ್ನ ಆಶೀರ್ವದಿಸುತ್ತಾನೆ.

ದೇವರು ಪ್ರವಾದಿ ಮೋಶೆಗೆ ದೊಡ್ಡ ದೊಡ್ಡ ಅದ್ಭುತಗಳನ್ನ ಮಾಡೋ ಶಕ್ತಿ ಕೊಟ್ಟ. ಆದರೂ ಮೋಶೆ ದೇವರ ಬಗ್ಗೆ ಇನ್ನೂ ಹೆಚ್ಚು ಕಲಿಬೇಕು ಅಂತ ಇಷ್ಟಪಟ್ಟ. ಹಾಗಾಗಿ ಹೀಗೆ ಪ್ರಾರ್ಥಿಸಿದ: “ನಿನ್ನ ಮಾರ್ಗವನ್ನು ನನಗೆ ತೋರಿಸು; ಆಗ ನಿನ್ನ ದಯೆ ನನಗೆ ದೊರೆಯಿತೆಂದು ನನಗೆ ತಿಳಿದಿರುವದು.” (ವಿಮೋಚನಕಾಂಡ 33:13) ಮೋಶೆ ಮಾಡಿದ ಈ ಪ್ರಾರ್ಥನೆ ದೇವರಿಗೆ ಇಷ್ಟ ಆಯ್ತು. ಹಾಗಾಗಿ ತನ್ನ ಬಗ್ಗೆ ತನ್ನ ಗುಣಗಳ ಬಗ್ಗೆ ಇನ್ನು ಹೆಚ್ಚನ್ನ ತಿಳಿಸಿ ದೇವರು ಅವನನ್ನ ಆಶೀರ್ವದಿಸಿದ. ಉದಾಹರಣೆಗೆ ನಮ್ಮ ಸೃಷ್ಟಿಕರ್ತ “ಕನಿಕರವೂ ದಯೆಯೂ ಉಳ್ಳ ದೇವರು” ಅಂತ ಮೋಶೆ ಕಲಿತ.—ವಿಮೋಚನಕಾಂಡ 34:6, 7.

ನಾವೇನು ಕಲಿಬಹುದು? ದೇವರು ತನ್ನ ಬಗ್ಗೆ ತಿಳುಕೊಳ್ಳೋಕೆ ಯಾರೆಲ್ಲ ಪ್ರಯತ್ನ ಹಾಕುತ್ತಾರೋ, ಅವರು ಗಂಡಸರಾಗಿರಲಿ ಹೆಂಗಸರಾಗಿರಲಿ ಮಕ್ಕಳಾಗಿರಲಿ ಅವರನ್ನೆಲ್ಲ ಆಶೀರ್ವದಿಸುತ್ತಾನೆ. ಪವಿತ್ರ ಗ್ರಂಥದಲ್ಲಿ ದೇವರು ತನ್ನನ್ನ ಹೇಗೆ ಆರಾಧಿಸಬೇಕು ಅಂತ ತಿಳಿಸಿದ್ದಾನೆ. ಅಷ್ಟೇ ಅಲ್ಲ ಅವನು ನಮ್ಮನ್ನೆಲ್ಲ ಆಶೀರ್ವದಿಸಲು ತುದಿಗಾಲಲ್ಲಿ ನಿಂತು ಕಾಯ್ತಾ ಇದ್ದಾನೆ ಅಂತನೂ ಪವಿತ್ರ ಗ್ರಂಥ ಹೇಳುತ್ತೆ.

ಯೇಸು

ಯೇಸು ಎಲ್ಲಾ ರೀತಿಯ ರೋಗಗಳನ್ನ ವಾಸಿ ಮಾಡಿದ

ದೇವರು ಕೊಡೋ ಶಾಶ್ವತ ಆಶೀರ್ವಾದಗಳು ನಮಗೆ ಬೇಕಂದ್ರೆ ಯೇಸು ಬಗ್ಗೆ ಮತ್ತು ಅವನು ಕಲಿಸಿದ ವಿಷಯಗಳ ಬಗ್ಗೆ ತಿಳುಕೊಳ್ಳಬೇಕು.

ಪವಿತ್ರ ಗ್ರಂಥದಲ್ಲಿ ಯೇಸುವಿನ ಜೀವನದ ಬಗ್ಗೆ ಮತ್ತು ಅವನು ಕಲಿಸಿದ ವಿಷಯಗಳ ಬಗ್ಗೆ ತುಂಬ ಮಾಹಿತಿ ಇದೆ. ದೇವರು ಯೇಸುಗೆ ಹಲವಾರು ಅದ್ಭುತಗಳನ್ನ ಮಾಡೋ ಶಕ್ತಿ ಕೊಟ್ಟನು. ಆ ಶಕ್ತಿನ ಉಪಯೋಗಿಸಿ ಯೇಸು ಅಂಧರನ್ನ, ಕಿವುಡರನ್ನ, ಕುಂಟರನ್ನ ವಾಸಿ ಮಾಡಿದ. ಅಷ್ಟೇ ಅಲ್ಲ ಸತ್ತವರನ್ನ ಮತ್ತೆ ಜೀವಂತ ಎಬ್ಬಿಸಿದ. ಹೀಗೆ ದೇವರು ಎಲ್ಲ ಮಾನವರಿಗೆ ಯಾವೆಲ್ಲ ಆಶೀರ್ವಾದಗಳನ್ನ ಕೊಡಲಿದ್ದಾನೆ ಅಂತ ಯೇಸು ತೋರಿಸಿದ. ಆ ಆಶೀರ್ವಾದಗಳನ್ನ ನಾವು ಪಡೀಬೇಕಂದ್ರೆ ಏನು ಮಾಡಬೇಕು ಅಂತನೂ ಯೇಸು ಯೋಹಾನ 17:3 ರಲ್ಲಿ ತಿಳಿಸಿದ್ದಾನೆ. ಅಲ್ಲಿ ಹೇಳುತ್ತೆ, “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.”

ಯೇಸುಗೆ ಜನರ ಮೇಲೆ ತುಂಬ ಪ್ರೀತಿ ಇತ್ತು. ಅವನು ಗಂಡಸ್ರು-ಹೆಂಗಸ್ರು, ಚಿಕ್ಕವ್ರು-ದೊಡ್ಡವ್ರು ಅನ್ನೋ ಭೇದಭಾವ ಮಾಡಲಿಲ್ಲ. ಹಾಗಾಗಿನೇ ಯೇಸು “ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ . . . ನನ್ನಿಂದ ಕಲಿಯಿರಿ” ಅಂತ ಹೇಳಿದಾಗ ಜನರು ಯಾವುದೇ ಅಂಜಿಕೆ ಇಲ್ಲದೆ ಅವನ ಹತ್ರ ಹೋಗುತ್ತಿದ್ರು. (ಮತ್ತಾಯ 11:29) ಆಗಿನ ಕಾಲದ ಜನರು ಹೆಂಗಸರನ್ನ ಕೀಳಾಗಿ ನೋಡ್ತಿದ್ರು. ಆದ್ರೆ ಯೇಸು ಹಾಗೆ ಮಾಡದೆ ಹೆಂಗಸರಿಗೆ ಗೌರವ ಕೊಡುತ್ತಿದ್ದ.

ನಾವೇನು ಕಲಿಬಹುದು? ಯೇಸುಗೆ ಜನರ ಮೇಲೆ ಅಪಾರ ಪ್ರೀತಿ ಇತ್ತು. ಯೇಸು ತರ ನಾವು ಸಹ ಜನರ ಜೊತೆ ಪ್ರೀತಿಯಿಂದ ನಡಕೋಬೇಕು.

ಯೇಸು ದೇವರಲ್ಲ

ಪವಿತ್ರ ಗ್ರಂಥ ಹೇಳೋ ಪ್ರಕಾರ ನಮಗೆ ನಿಜವಾಗಿ ಒಬ್ಬನೇ ದೇವರು ಇರೋದು. ಮತ್ತು ಯೇಸು ದೇವರ ಪ್ರವಾದಿನೇ ಹೊರತು ದೇವರಲ್ಲ. (1 ಕೊರಿಂಥ 8:6) ದೇವರು ತನಗಿಂತ ದೊಡ್ಡವನು ಮತ್ತು ತನ್ನನ್ನ ದೇವರೇ ಭೂಮಿಗೆ ಕಳಿಸಿದ್ದಾನೆ ಅಂತ ಯೇಸುನೇ ಸ್ಪಷ್ಟವಾಗಿ ಹೇಳಿದ.—ಯೋಹಾನ 11:41, 42; 14:28. *

^ ಪ್ಯಾರ. 17 ಯೇಸು ಕ್ರಿಸ್ತನ ಬಗ್ಗೆ ಇನ್ನು ಹೆಚ್ಚನ್ನ ತಿಳಿಯಲು www.pr418.comಯಲ್ಲಿ ಇರೋ ದೇವರಿಂದ ನಿಮಗೊಂದು ಸಿಹಿಸುದ್ದಿ! ಪತ್ರಿಕೆಯ 4 ನೇ ಪಾಠ ನೋಡಿ.