ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ನಿಮ್ಮ ಬಗ್ಗೆ ಚಿಂತಿಸುವುದರಿಂದ ನಿಮಗಾಗುವ ಪ್ರಯೋಜನ

ದೇವರು ನಿಮ್ಮ ಬಗ್ಗೆ ಚಿಂತಿಸುವುದರಿಂದ ನಿಮಗಾಗುವ ಪ್ರಯೋಜನ

ದೇವರು ನಮ್ಮ ಶರೀರಕ್ಕೆ ತನ್ನಷ್ಟಕ್ಕೆ ತಾನೇ ಗುಣವಾಗುವ ಅದ್ಭುತ ಸಾಮರ್ಥ್ಯ ಕೊಟ್ಟಿದ್ದಾನೆ. ಆಕಸ್ಮಿಕವಾಗಿ ಕುಯಿದುಕೊಂಡು ಗಾಯ ಆದಾಗ, ತರಚು ಗಾಯವಾದಾಗ ಅಥವಾ ಏನಾದರೂ ಚುಚ್ಚಿದಾಗ ನಮ್ಮ ದೇಹವು, “ಕ್ಲಿಷ್ಟಕರವಾದ ಒಂದು ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಈ ಪ್ರಕ್ರಿಯೆಯನ್ನು ಚಿಕ್ಕ-ದೊಡ್ಡ ಗಾಯಗಳು ಗುಣವಾಗಲಿಕ್ಕಾಗಿ ನಮ್ಮಲ್ಲಿ ಇಡಲಾಗಿದೆ.” (ಜಾನ್ಸ್‌ ಹಾಪ್ಕಿನ್ಸ್‌ ಮೆಡಿಸಿನ್‌) ರಕ್ತಸುರಿಯುವುದನ್ನು ನಿಲ್ಲಿಸಲು, ಗಾಯವನ್ನು ಗುಣಪಡಿಸಲು ಮತ್ತು ಅಂಗಾಂಶವನ್ನು ಬಲಗೊಳಿಸಲು ದೇಹವು ತಕ್ಷಣವೇ ಕ್ರಿಯೆಗೈಯಲು ಆರಂಭಿಸುತ್ತದೆ.

ಯೋಚಿಸಿ: ಸೃಷ್ಟಿಕರ್ತನು ನಮ್ಮ ಭಾವನಾತ್ಮಕ ಗಾಯಗಳನ್ನು ಸಹ ವಾಸಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದಾನೆ. ದೇಹಕ್ಕಾಗುವ ಗಾಯಗಳನ್ನು ಗುಣಪಡಿಸಿಕೊಳ್ಳುವ ಸಾಮರ್ಥ್ಯವನ್ನು ಕೊಟ್ಟಿರುವ ಆತನು ಈ ಮಾತನ್ನು ಸಹ ನೆರವೇರಿಸುತ್ತಾನೆಂದು ನಾವು ನಂಬಬಹುದಲ್ಲವೇ? ಆತನು “ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ” ಎಂದು ಕೀರ್ತನೆಗಾರನು ಬರೆದಿದ್ದಾನೆ. (ಕೀರ್ತನೆ 147:3) ಹಿಂದೆ ನಡೆದ ಅಥವಾ ಈಗ ನಡೆಯುತ್ತಿರುವ ಯಾವುದೊ ವಿಷಯದಿಂದ ನೀವು ಭಾವನಾತ್ಮಕವಾಗಿ ಗಾಯಗೊಂಡು ಕಷ್ಟಪಡುತ್ತಿರಬಹುದು. ಯೆಹೋವನು ಈಗಲೂ ಮುಂದಕ್ಕೂ ನಿಮ್ಮ ಈ ಗಾಯಗಳನ್ನು ಕಟ್ಟುತ್ತಾನೆ ಎನ್ನಲು ಏನು ಆಧಾರವಿದೆ?

ದೇವರ ಪ್ರೀತಿಯ ಬಗ್ಗೆ ಬೈಬಲ್‌ ಏನು ಕಲಿಸುತ್ತದೆ?

ದೇವರು ಹೀಗೆ ಮಾತುಕೊಟ್ಟಿದ್ದಾನೆ: “ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ.” (ಯೆಶಾಯ 41:10) ಯೆಹೋವ ದೇವರಿಗೆ ನಮ್ಮ ಬಗ್ಗೆ ಚಿಂತೆ ಇದೆ ಎಂದು ನಮಗೆ ತಿಳಿದಿರುವಾಗ ಮನಶ್ಶಾಂತಿ ಇರುತ್ತದೆ ಮತ್ತು ಬೇರೆಬೇರೆ ರೀತಿಯ ಕಷ್ಟಗಳನ್ನು ಎದುರಿಸಲು ಬೇಕಾದ ಮನೋಬಲ ಇರುತ್ತದೆ. ಈ ಆಂತರಿಕ ಶಾಂತಿಯನ್ನು ಯೇಸುವಿನ ಶಿಷ್ಯನಾದ ಪೌಲನು “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ” ಎಂದು ಕರೆದಿದ್ದಾನೆ. ಅವನು ಮುಂದುವರಿಸಿ ಹೇಳಿದ್ದು: “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:4-7, 9, 13.

ಬೈಬಲ್‌ ನಮಗೆ ನಂಬಿಕೆ ಬೆಳೆಸಿಕೊಳ್ಳಲು ಸಹಾಯಮಾಡುತ್ತದೆ. ಯಾವುದರಲ್ಲಿ? ಮಾನವಕುಲದ ಭವಿಷ್ಯಕ್ಕಾಗಿ ಯೆಹೋವನು ಮಾಡಿರುವ ವಾಗ್ದಾನಗಳಲ್ಲಿ. ಉದಾಹರಣೆಗೆ ಪ್ರಕಟನೆ 21:4, 5 (ಮುಂದಿನ ಪುಟದಲ್ಲಿದೆ) ಆತನು ಏನು ಮಾಡಲಿದ್ದಾನೆ ಮತ್ತು ಅದನ್ನಾತನು ಖಂಡಿತ ಮಾಡುತ್ತಾನೆಂದು ನಾವು ಯಾಕೆ ನಂಬಬಹುದೆಂದು ತಿಳಿಸುತ್ತದೆ:

  • ದೇವರು ಜನರ “ಕಣ್ಣೀರನ್ನೆಲ್ಲಾ ಒರಸಿಬಿಡುವನು.” ಯೆಹೋವನು ನಮ್ಮ ಎಲ್ಲಾ ಕಷ್ಟಗಳನ್ನು, ಚಿಂತೆಗಳನ್ನು ತೆಗೆದುಹಾಕುವನು, ಬೇರೆಯವರಿಗೆ ತುಂಬ ಕ್ಷುಲ್ಲಕವಾಗಿ ತೋರಬಹುದಾದ ಸಮಸ್ಯೆಗಳನ್ನು ಸಹ ತೆಗೆದುಹಾಕುವನು.

  • ಸ್ವರ್ಗದಲ್ಲಿ ಮಹಿಮಾಭರಿತನಾಗಿ ‘ಸಿಂಹಾಸನದ ಮೇಲೆ ಕುಳಿತುಕೊಂಡಿರುವ’ ಇಡೀ ಸೃಷ್ಟಿಯ ಸರ್ವಶಕ್ತ ರಾಜನು ತನ್ನ ಶಕ್ತಿ ಮತ್ತು ಅಧಿಕಾರವನ್ನು ಕಷ್ಟಗಳನ್ನು ತಡೆಯಲಿಕ್ಕಾಗಿ ಮತ್ತು ನಮಗೆ ಬೇಕಾದ ಸಹಾಯ ಕೊಡಲಿಕ್ಕಾಗಿ ಬಳಸುವನು.

  • ತಾನು ಕೊಟ್ಟ ಮಾತುಗಳೆಲ್ಲ “ನಂಬತಕ್ಕವುಗಳೂ ಸತ್ಯವಾದವುಗಳೂ” ಆಗಿವೆಯೆಂದು ಯೆಹೋವನು ಖಾತರಿಕೊಡುತ್ತಾನೆ. ಸತ್ಯ ದೇವರೆಂಬ ತನ್ನ ಖ್ಯಾತಿಯನ್ನೇ ಪಣಕ್ಕೊಡ್ಡಿ ತನ್ನ ವಾಗ್ದಾನಗಳನ್ನು ನೆರವೇರಿಸುತ್ತೇನೆಂದು ಖಾತರಿ ಕೊಡುತ್ತಾನೆ.

“‘ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣ ವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ’ ಎಂದು ಹೇಳುವುದನ್ನು ನಾನು ಕೇಳಿಸಿಕೊಂಡೆನು. ಆಗ ಸಿಂಹಾ ಸನದ ಮೇಲೆ ಕುಳಿತುಕೊಂಡಿದ್ದಾತನು, ‘ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ’ ಎಂದು ಹೇಳಿದನು. ಇದಲ್ಲದೆ ಆತನು ‘ಬರೆ, ಏಕೆಂದರೆ ಈ ಮಾತುಗಳು ನಂಬತಕ್ಕವುಗಳೂ ಸತ್ಯ ವಾದವುಗಳೂ ಆಗಿವೆ’ ಎಂದೂ ಹೇಳಿದನು.”—ಪ್ರಕಟನೆ 21:4, 5.

ವಿಶ್ವ ಮತ್ತು ಬೈಬಲ್‌ ಇವೆರಡೂ ಸ್ವರ್ಗದಲ್ಲಿರುವ ನಮ್ಮ ತಂದೆಯ ವ್ಯಕ್ತಿತ್ವ ಹಾಗೂ ಗುಣಗಳನ್ನು ಪ್ರಕಟಪಡಿಸುತ್ತವೆ. ದೇವರನ್ನು ತಿಳಿದುಕೊಂಡು ಆತನನ್ನು ಒಬ್ಬ ಆಪ್ತ ಸ್ನೇಹಿತನನ್ನಾಗಿ ಮಾಡಿಕೊಳ್ಳುವಂತೆ ಸೃಷ್ಟಿಯು ಪರೋಕ್ಷವಾದ ಆಮಂತ್ರಣ ಕೊಟ್ಟಂತೆ ಇದೆ. ಆದರೆ ಬೈಬಲ್‌ ಆ ಆಮಂತ್ರಣವನ್ನು ನೇರವಾಗಿ ಕೊಡುತ್ತಾ ಹೀಗನ್ನುತ್ತದೆ: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಅಪೊಸ್ತಲರ ಕಾರ್ಯಗಳು 17:27 ಹೀಗನ್ನುತ್ತದೆ: “ಆತನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ.”

ನೀವು ಸಮಯ ಮಾಡಿಕೊಂಡು ದೇವರ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ, “ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎನ್ನುವುದು ನಿಮಗೆ ಹೆಚ್ಚೆಚ್ಚು ಮನವರಿಕೆಯಾಗುತ್ತಾ ಹೋಗುವುದು. (1 ಪೇತ್ರ 5:7) ಯೆಹೋವನಲ್ಲಿ ಇಂಥ ಭರವಸೆಯನ್ನಿಡುವುದರ ಪ್ರಯೋಜನಗಳೇನು?

ಜಪಾನಿನ ಟೊರು ಎಂಬವರ ಉದಾಹರಣೆ ನೋಡಿ. ಅವನ ತಾಯಿ ಕ್ರೈಸ್ತಳಾಗಿದ್ದರೂ ಅವನು ಜಪಾನೀ ಮಾಫಿಯ ತಂಡವಾದ ಯಾಕೂಸಾದೊಟ್ಟಿಗೆ ಸೇರಿ ಹಿಂಸಾತ್ಮಕ ಜಗತ್ತಿನ ಭಾಗವಾದನು. ಅವನು ಹೇಳುವುದು: “ದೇವರು ನನ್ನನ್ನು ದ್ವೇಷಿಸುತ್ತಾನೆ, ನನ್ನ ಜೊತೆಗಿರುವವರ ಅದರಲ್ಲೂ ನನಗೆ ತುಂಬ ಪ್ರಿಯರಾಗಿದ್ದವರ ಸಾವು ಆತನು ನನಗೆ ಕೊಡುವ ಶಿಕ್ಷೆ ಆಗಿದೆಯೆಂದು ನೆನಸುತ್ತಿದ್ದೆ.” ಆ ತಂಡದಲ್ಲಿನ ವಿನಾಶಕಾರಿ ವಾತಾವರಣ ಮತ್ತು ಮನಸ್ಥಿತಿಯಿಂದಾಗಿ ತಾನು “ನಿರ್ದಯಿ, ಕಟುಕ ವ್ಯಕ್ತಿ” ಆಗಿಬಿಟ್ಟೆನೆಂದು ಅವನು ಒಪ್ಪಿಕೊಳ್ಳುತ್ತಾನೆ. ತನಗಿದ್ದ ಒಂದು ದೊಡ್ಡ ಆಸೆ ಬಗ್ಗೆ ಹೀಗನ್ನುತ್ತಾನೆ: “ನನಗಿಂತಲೂ ಹೆಚ್ಚು ಪ್ರಸಿದ್ಧನಾಗಿರುವ ವ್ಯಕ್ತಿಯನ್ನು ಕೊಂದು, ದೊಡ್ಡ ಹೆಸರು ಮಾಡಿ ಯುವ ಪ್ರಾಯದಲ್ಲೇ ಸಾಯಬೇಕೆಂದಿದ್ದೆ.”

ಆದರೆ ಟೊರು ಮತ್ತವನ ಹೆಂಡತಿ ಹ್ಯಾನಾ ಬೈಬಲಿನ ಅಧ್ಯಯನ ಮಾಡಿದಾಗ ಟೊರು ತನ್ನ ಜೀವನ ಮತ್ತು ದೃಷ್ಟಿಕೋನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಂಡನು. “ನನ್ನ ಗಂಡ ಮಾಡುತ್ತಿರುವ ಬದಲಾವಣೆಗಳನ್ನು ಕಣ್ಣಾರೆ ನೋಡಿದೆ” ಎನ್ನುತ್ತಾಳೆ ಹ್ಯಾನಾ. ಈಗ ಟೊರು ನಿಶ್ಚಯದಿಂದ ಹೀಗನ್ನುತ್ತಾನೆ: “ನಮ್ಮಲ್ಲಿ ಒಬ್ಬೊಬ್ಬರ ಬಗ್ಗೆಯೂ ನಿಜವಾಗಿ ಚಿಂತಿಸುವ ದೇವರು ಇದ್ದಾನೆ. ಯಾರೂ ಸಾಯುವುದನ್ನು ಆತನು ಬಯಸುವುದಿಲ್ಲ. ತಮ್ಮ ತಪ್ಪುಗಳಿಗಾಗಿ ನಿಜವಾಗಿ ಪಶ್ಚಾತ್ತಾಪಪಡುವವರನ್ನು ಕ್ಷಮಿಸಲು ಸಿದ್ಧನಿದ್ದಾನೆ. ನಾವು ಬೇರಾರಿಗೂ ಹೇಳಲಿಕ್ಕಾಗದ, ಯಾರೂ ಅರ್ಥಮಾಡಿಕೊಳ್ಳಲೂ ಆಗದ ವಿಷಯಗಳನ್ನು ಹೇಳುವಾಗ ಆತನು ಕಿವಿಗೊಡುತ್ತಾನೆ. ಯೆಹೋವನು ಭವಿಷ್ಯದಲ್ಲಿ ಅತಿ ಬೇಗನೆ ಎಲ್ಲ ಸಮಸ್ಯೆಗಳನ್ನು, ಕಷ್ಟಗಳನ್ನು, ನರಳಾಟವನ್ನು ತೆಗೆದುಹಾಕುತ್ತಾನೆ. ಈಗಲೂ ನಾವು ನಿರೀಕ್ಷಿಸಿಯೇ ಇಲ್ಲದ ವಿಧಗಳಲ್ಲಿ ನಮಗೆ ಸಹಾಯಮಾಡುತ್ತಾನೆ. ನಮ್ಮ ಬಗ್ಗೆ ಚಿಂತಿಸುತ್ತಾನೆ ಮತ್ತು ನಮಗೆ ತುಂಬ ಬೇಜಾರಾಗಿರುವಾಗ ಸಹಾಯಮಾಡುತ್ತಾನೆ.”—ಕೀರ್ತನೆ 136:23.

ಎಲ್ಲ ದುರಂತಗಳನ್ನು ನಿಲ್ಲಿಸಲು ಮತ್ತು ಎಲ್ಲ ಕಣ್ಣೀರನ್ನು ಒರೆಸಿಬಿಡಲು ದೇವರಿಗೆ ಶಕ್ತಿಯಿದೆ ಮತ್ತು ಅದನ್ನು ಖಂಡಿತ ಮಾಡುವನು. ಇದನ್ನು ತಿಳಿದಿರುವುದು ನಮಗೆ ಭವಿಷ್ಯಕ್ಕಾಗಿ ನಿಶ್ಚಿತ ನಿರೀಕ್ಷೆ ಕೊಡುತ್ತದೆ ಮಾತ್ರವಲ್ಲ ಈಗಲೂ ಚೆನ್ನಾಗಿ ಬಾಳಲು ಸಹಾಯಮಾಡುತ್ತದೆ ಎಂದು ಟೊರುವಿನ ಅನುಭವ ತೋರಿಸಿಕೊಡುತ್ತದೆ. ಹೌದು, ಕಷ್ಟಗಳಿಂದ ತುಂಬಿಹೋಗಿರುವ ಈ ಲೋಕದಲ್ಲೂ ದೇವರು ತೋರಿಸುವ ಪ್ರೀತಿತುಂಬಿದ ಕಾಳಜಿಯಿಂದ ನಿಮಗೆ ಪ್ರಯೋಜನವಾಗುತ್ತದೆ.