ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

3 ಸಮಸ್ಯೆಗಳನ್ನು ತಾಳಿಕೊಳ್ಳಲು ಸಹಾಯ

3 ಸಮಸ್ಯೆಗಳನ್ನು ತಾಳಿಕೊಳ್ಳಲು ಸಹಾಯ

ಕೆಲವು ಸಮಸ್ಯೆಗಳಿಂದ ನಾವೀಗ ದೂರವಿರಲೂ ಸಾಧ್ಯವಿಲ್ಲ, ಅವುಗಳನ್ನು ಬಗೆಹರಿಸಲೂ ಸಾಧ್ಯವಿಲ್ಲ. ಉದಾಹರಣೆಗೆ, ನಿಮ್ಮ ಆತ್ಮೀಯರಲ್ಲೊಬ್ಬರು ತೀರಿಕೊಂಡಿರಬಹುದು ಅಥವಾ ನಿಮಗೆ ದೀರ್ಘಕಾಲದ ಕಾಯಿಲೆ ಇರಬಹುದು. ಆ ನೋವನ್ನು ತಾಳಿಕೊಳ್ಳುವುದಲ್ಲದೆ ಬೇರೆ ದಾರಿ ಇರಲಿಕ್ಕಿಲ್ಲ. ಆದರೆ ತಾಳಿಕೊಳ್ಳುವುದು ಹೇಗೆ? ಅತಿ ಕಷ್ಟದ ಇಂಥ ಸನ್ನಿವೇಶದಲ್ಲೂ ಬೈಬಲ್‌ ಸಹಾಯಮಾಡಬಲ್ಲದಾ?

ದೀರ್ಘಕಾಲದ ಕಾಯಿಲೆ

ರೋಝ್‌ ಹೀಗನ್ನುತ್ತಾಳೆ: “ನನಗೊಂದು ವಂಶವಾಹಿ ಕಾಯಿಲೆ ಇದೆ. ಇದರಿಂದಾಗಿ ಯಾವಾಗಲೂ ತೀವ್ರ ನೋವಿರುತ್ತದೆ. ನನ್ನ ಜೀವನದ ಗುಣಮಟ್ಟ ಕುಸಿದಿದೆ.” ಅವಳಿಗಿದ್ದ ಒಂದು ದೊಡ್ಡ ಚಿಂತೆ ಏನೆಂದರೆ ಕೆಲವೊಮ್ಮೆ ಬೈಬಲ್‌ ಅಧ್ಯಯನ ಮತ್ತು ಬೇರೆ ಆಧ್ಯಾತ್ಮಿಕ ವಿಷಯಗಳನ್ನು ಮಾಡುವಾಗ ಅವಳಿಗೆ ಪೂರ್ತಿ ಗಮನ ಕೊಡಲು ಆಗುತ್ತಿರಲಿಲ್ಲ. ಅವಳಿಗೆ ಮತ್ತಾಯ 19:26​ರಲ್ಲಿರುವ ಯೇಸುವಿನ ಮಾತಿನಿಂದ ತುಂಬ ಸಹಾಯವಾಯಿತು. “ದೇವರಿಗೆ ಎಲ್ಲವೂ ಸಾಧ್ಯ” ಅಂತ ಅಲ್ಲಿದೆ. ಅಧ್ಯಯನ ಮಾಡಲು ಒಂದೇ ವಿಧಾನವಲ್ಲ, ಬೇರೆ ವಿಧಾನಗಳೂ ಇವೆ ಎಂದು ರೋಝ್‌ ತಿಳಿದುಕೊಂಡಳು. ಅವಳಿಗಿದ್ದ ನೋವಿನಿಂದಾಗಿ ಕೆಲವೊಮ್ಮೆ ಓದಲು ಆಗದಿದ್ದರಿಂದ ಬೈಬಲ್‌ ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳ ರೆಕಾರ್ಡಿಂಗ್‌ಗಳನ್ನು ಕೇಳಿಸಿಕೊಳ್ಳಲು ಆರಂಭಿಸಿದಳು. * “ಹೀಗೆ ಕೇಳಿಸಿಕೊಳ್ಳುವ ವ್ಯವಸ್ಥೆ ಇಲ್ಲದಿದ್ದರೆ ನನ್ನ ಆಧ್ಯಾತ್ಮಿಕತೆಯನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದೆನೋ ನನಗೆ ಗೊತ್ತಿಲ್ಲ” ಎಂದು ಅವಳು ಹೇಳುತ್ತಾಳೆ.

ಹಿಂದೆ ಮಾಡುತ್ತಿದ್ದಷ್ಟು ಈಗ ಮಾಡಲಿಕ್ಕಾಗುತ್ತಿಲ್ಲ ಎಂದು ಬೇಸರವಾದಾಗೆಲ್ಲಾ ರೋಝ್‌ಗೆ 2 ಕೊರಿಂಥ 8:12​ರಲ್ಲಿರುವ ಈ ಮಾತು ಸಾಂತ್ವನ ಕೊಡುತ್ತದೆ: “ಒಬ್ಬನಿಗೆ ಕೊಡುವುದಕ್ಕೆ ಮನಸ್ಸಿದ್ದರೆ ಅವನು ತನ್ನಲ್ಲಿರುವುದಕ್ಕೆ ತಕ್ಕಂತೆ ಕೊಟ್ಟರೆ ಸಾಕು. ಅವನಲ್ಲಿ ಇಲ್ಲದ್ದನ್ನು ದೇವರು ಬಯಸುವುದಿಲ್ಲ.” (ಪವಿತ್ರ ಗ್ರಂಥ ಭಾಷಾಂತರ) ತನಗೆ ಸಮಸ್ಯೆ ಇದ್ದರೂ ತನ್ನಿಂದಾದ್ದೆಲ್ಲವನ್ನೂ ಮಾಡುತ್ತಿರುವುದರಿಂದ ದೇವರು ಸಂತೋಷಪಡುತ್ತಾನೆ ಎಂದು ಈ ವಚನ ರೋಝ್‌ಗೆ ನೆನಪುಹುಟ್ಟಿಸುತ್ತದೆ.

ಸಾವಿನ ನೋವು

ಹಿಂದಿನ ಲೇಖನಗಳಲ್ಲಿ ತಿಳಿಸಲಾದ ಡೆಲ್ಫಿನ್‌ ಹೀಗೆ ನೆನಪಿಸಿಕೊಳ್ಳುತ್ತಾಳೆ: “ನನ್ನ 18 ವರ್ಷದ ಮಗಳು ತೀರಿಹೋದಾಗ ನನಗೆಷ್ಟು ನೋವಾಯಿತೆಂದರೆ ನನ್ನಿಂದ ಇನ್ನು ಬದುಕಲಿಕ್ಕೇ ಆಗಲ್ಲ, ಏನೇ ಆದರೂ ಮುಂಚಿನಂತೆ ಇರಲು ಸಾಧ್ಯ ಇಲ್ಲ ಎಂದು ಅನಿಸಿತು.” ಕೀರ್ತನೆ 94:19​ರಲ್ಲಿರುವ ಈ ಮಾತುಗಳಿಂದ ಅವಳಿಗೆ ತುಂಬ ಸಾಂತ್ವನ ಸಿಕ್ಕಿತು: “ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.” ಆಕೆ ಹೇಳುವುದು: “ನನ್ನ ನೋವನ್ನು ಕಡಿಮೆ ಮಾಡುವಂಥ ವಿಷಯಗಳು ಯಾವುದೆಂದು ತಿಳಿಯಲು ಸಹಾಯ ಮಾಡುವಂತೆ ಯೆಹೋವನಿಗೆ ಪ್ರಾರ್ಥಿಸಿದೆ.”

ಆಕೆ ಒಂದು ಅರ್ಥಪೂರ್ಣ ಸ್ವಯಂಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಳು. ಸಮಯ ಹೋದಂತೆ ಅವಳಿಗೆ ತಾನು ಬಣ್ಣದ ಕಡ್ಡಿಯಂತೆ ಇದ್ದೇನೆಂದು ಅನಿಸಿತು. ಕಡ್ಡಿ ಮುರಿದರೂ ಅದರಿಂದ ಬಣ್ಣ ಹಾಕಬಹುದು. ಹಾಗೆಯೇ ತಾನು ಒಂದರ್ಥದಲ್ಲಿ ಮುರಿದುಹೋಗಿದ್ದರೂ ಇತರರಿಗೆ ಸಹಾಯ ಮಾಡಬಹುದು ಎಂದು ಆಕೆ ತಿಳಿದುಕೊಂಡಳು. “ನಾನು ಯಾರಿಗೆಲ್ಲ ಬೈಬಲ್‌ ಕಲಿಸುತ್ತಿದ್ದೆನೊ ಅವರಿಗೆ ಯೆಹೋವನ ತತ್ವಗಳನ್ನು ಮತ್ತು ಬೈಬಲ್‌ ಸತ್ಯಗಳನ್ನು ತಿಳಿಸಿ ಸಂತೈಸುತ್ತಿದ್ದಾಗ, ಯೆಹೋವನು ಈ ರೀತಿಯಲ್ಲಿ ನನ್ನ ನೋವನ್ನು ಕಡಿಮೆಮಾಡಿ ಸಂತೈಸುತ್ತಿದ್ದಾನೆಂದು ತಿಳಿದುಕೊಂಡೆ” ಎಂದು ಆಕೆ ಹೇಳುತ್ತಾಳೆ. ತೀವ್ರ ನೋವನ್ನು ಅನುಭವಿಸಿದವರೆಂದು ಬೈಬಲ್‌ನಲ್ಲಿ ತಿಳಿಸಲಾಗಿರುವ ವ್ಯಕ್ತಿಗಳ ಪಟ್ಟಿ ಮಾಡಿದಳು. “ಅವರೆಲ್ಲರೂ ತುಂಬ ಪ್ರಾರ್ಥಿಸುತ್ತಿದ್ದ ವ್ಯಕ್ತಿಗಳಾಗಿದ್ದರು” ಎಂದು ಅವಳಿಗೆ ಗೊತ್ತಾಯಿತು. ಬೈಬಲನ್ನು ಓದುವುದರಿಂದ ಮಾತ್ರ ಸಮಸ್ಯೆಯನ್ನು ತಾಳಿಕೊಳ್ಳಲು ಸಾಧ್ಯ ಎಂದೂ ಆಕೆ ಕಲಿತಳು.

ಆಗಿಹೋಗಿರುವುದರ ಮೇಲಲ್ಲ, ಮುಂದೆ ಆಗಲಿರುವುದರ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸಬೇಕೆಂದೂ ಡೆಲ್ಫಿನ್‌ ಬೈಬಲಿನ ಅಧ್ಯಯನದ ಮೂಲಕ ಕಲಿತಳು. ಅಪೊಸ್ತಲರ ಕಾರ್ಯಗಳು 24:15​ರಲ್ಲಿ ತಿಳಿಸಲಾದ ಈ ನಿರೀಕ್ಷೆ ಆಕೆಗೆ ಸಾಂತ್ವನ ನೀಡಿತು: ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು.’ ತನ್ನ ಮಗಳನ್ನು ಯೆಹೋವನು ಪುನರುತ್ಥಾನ ಮಾಡುತ್ತಾನೆ ಅಥವಾ ಪುನಃ ಬದುಕುವಂತೆ ಮಾಡುತ್ತಾನೆ ಎಂದು ಆಕೆಗೆ ಎಷ್ಟು ಖಾತರಿ ಇದೆ? ಇದಕ್ಕುತ್ತರ ಅವಳ ಈ ಮಾತುಗಳಲ್ಲಿದೆ: “ಮುಂದೆ ನನ್ನ ಮಗಳು ಬರುವುದನ್ನು ಮನಸ್ಸಲ್ಲೇ ಚಿತ್ರಿಸಿಕೊಳ್ಳುತ್ತೇನೆ. ನಾವು ಭೇಟಿಯಾಗುವ ದಿನ ಈಗಾಗಲೇ ನಿಶ್ಚಯ ಆಗಿದೆ. ಅದು ನನ್ನ ತಂದೆ [ಯೆಹೋವನು] ತನ್ನ ಕ್ಯಾಲೆಂಡರಿನಲ್ಲಿ ಗುರುತಿಸಿ ಇಟ್ಟಿರುವಂತಿದೆ. ನಾವಿಬ್ಬರೂ ಮುಂದೆ ನಮ್ಮ ಉದ್ಯಾನದಲ್ಲಿ ಒಟ್ಟಿಗಿರುವ ದೃಶ್ಯ ಕಾಣಿಸುತ್ತಿದೆ. ಇದು, ಅವಳು ಹುಟ್ಟಿದ ದಿನ ಅವಳನ್ನು ನೋಡಿ, ಅವಳಿಗಾಗಿ ನನ್ನಲ್ಲಿ ಪ್ರೀತಿ ಉಕ್ಕಿದ ಕ್ಷಣ ಮನಸ್ಸಲ್ಲಿ ಎಷ್ಟು ಸ್ಪಷ್ಟವಾಗಿದೆಯೋ ಅಷ್ಟೇ ಸ್ಪಷ್ಟವಾಗಿದೆ.”

^ ಪ್ಯಾರ. 4 ಇಂಥ ಅನೇಕ ರೆಕಾರ್ಡಿಂಗ್‌ಗಳು jw.org ವೆಬ್‌ಸೈಟಿನಲ್ಲಿ ಲಭ್ಯ.

ಜೀವನದಲ್ಲಿ ಕತ್ತಲು ತುಂಬಿದಾಗಲೂ ಬೈಬಲ್‌ ನಿಮಗೆ ಸಾಂತ್ವನ ಕೊಡಬಲ್ಲದು