ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಇಸ್ರಾಯೇಲ್ಯರು ಕಾಡಲ್ಲಿದ್ದಾಗ ಮನ್ನ ಮತ್ತು ಲಾವಕ್ಕಿ ಬಿಟ್ರೆ ಅವ್ರಿಗೆ ತಿನ್ನೋಕೆ ಬೇರೇನಾದ್ರೂ ಇತ್ತಾ?

ಇಸ್ರಾಯೇಲ್ಯರು ಕಾಡಲ್ಲಿದ್ದಾಗ 40 ವರ್ಷ ಮನ್ನಾನೇ ತಿಂದ್ರು. (ವಿಮೋ. 16:35) ಎರಡು ಸಂದರ್ಭದಲ್ಲಿ ಯೆಹೋವ ಅವ್ರಿಗೆ ಲಾವಕ್ಕಿಗಳನ್ನ ತಿನ್ನೋಕೆ ಕೊಟ್ಟನು. (ವಿಮೋ. 16:12, 13; ಅರ. 11:31) ಆದ್ರೂ ಅವ್ರ ಹತ್ರ ತಿನ್ನೋಕೆ ಬೇರೆ ಆಹಾರನೂ ಇತ್ತು.

ಯೆಹೋವ ದೇವರು ಅವ್ರನ್ನ ಕೆಲವೊಮ್ಮೆ ‘ವಿಶ್ರಮಿಸೋ ಸ್ಥಳಕ್ಕೆ’ ಕರ್ಕೊಂಡು ಹೋಗ್ತಿದ್ದನು. (ಅರ. 10:33) ಅಲ್ಲಿ ಅವ್ರಿಗೆ ಕುಡಿಯೋಕೆ ನೀರು ಮತ್ತು ತಿನ್ನೋಕೆ ಬೇರೆಬೇರೆ ತರದ ಆಹಾರ ಸಿಕ್ತಿತ್ತು. ಹೀಗೆ ಅವರು ಏಲೀಮಿಗೆ ಹೋದಾಗ ಅಲ್ಲಿ “12 ನೀರಿನ ತೊರೆ, 70 ಖರ್ಜೂರ ಮರ ಇತ್ತು.” (ವಿಮೋ. 15:27) ಆ ಖರ್ಜೂರದ ಮರಗಳ ಬಗ್ಗೆ ಬೈಬಲಿನ ಗಿಡಗಳು ಅನ್ನೋ ಪುಸ್ತಕದಲ್ಲಿ ಹೀಗಿದೆ: “ಖರ್ಜೂರದ ಮರಗಳು ಆ ಜಾಗದಲ್ಲಿ ಜಾಸ್ತಿ ಬೆಳೀತಿತ್ತು . . . ಮರಳುಗಾಡಲ್ಲಿ ಜನ ಇದನ್ನೇ ಜಾಸ್ತಿ ತಿಂತಿದ್ರು. ಇದ್ರಿಂದ ಎಣ್ಣೆ ಸಿಕ್ತಿತ್ತು ಮತ್ತು ಎಷ್ಟೋ ಜನ ಅದ್ರಿಂದ ಗುಡಿಸಲು ಕಟ್ಕೊಳ್ತಿದ್ರು.”

ಇಸ್ರಾಯೇಲ್ಯರು ಆಗ ಹಚ್ಚ ಹಸಿರಾಗಿದ್ದ ಜಾಗಗಳಿಗೂ ಹೋಗ್ತಾ ಇದ್ರು. ಅವರು ಫೇರನ್‌ ನದಿ a ಹತ್ರನೂ ಹೋಗಿದ್ರು. ಡಿಸ್ಕವರಿಂಗ್‌ ದ ವರ್ಲ್ಡ್‌ ಅಫ್‌ ದ ಬೈಬಲ್‌ ಅನ್ನೋ ಪುಸ್ತಕ ಹೀಗೆ ಹೇಳುತ್ತೆ: “ಫೇರನ್‌ ನದಿ ಸುಮಾರು 130 ಕಿ.ಮೀ. ಉದ್ದ ಇತ್ತು. ಸೀನಾಯಿ ಪ್ರದೇಶದಲ್ಲೇ ಅದು ತುಂಬ ಹೆಸರುವಾಸಿಯಾಗಿತ್ತು ಮತ್ತು ತುಂಬ ಸುಂದರವಾಗಿತ್ತು. ಫೇರನ್‌ ನದಿ ಶುರು ಆಗೋ ಜಾಗದಿಂದ 45 ಕಿ.ಮೀ. ಮುಂದೆ ಹೋದ್ರೆ ಫೇರನ್‌ ತೊರೆ (ಓಯಾಸಿಸ್‌) ಸಿಗುತ್ತೆ. ಅದು ಸಮುದ್ರ ಮಟ್ಟದಿಂದ ಸುಮಾರು 2,000 ಅಡಿ ಎತ್ರದಲ್ಲಿದೆ ಮತ್ತು 4.8 ಕಿ.ಮೀ. ಉದ್ದ ಇದೆ. ಇಲ್ಲಿ ತುಂಬ ಸುಂದರವಾಗಿರೋ ಸಾವಿರಾರು ಖರ್ಜೂರದ ಮರಗಳಿವೆ. ಇದು ನೋಡೋಕೆ ಏದೆನ್‌ ತೋಟದ ತರನೇ ಇದೆ. ಅದಕ್ಕೇ ಸಾವಿರಾರು ವರ್ಷಗಳಿಂದ ತುಂಬ ಪ್ರವಾಸಿಗರು ಇಲ್ಲಿಗೆ ಬಂದು ಹೋಗ್ತಿದ್ದಾರೆ.”

ಫೇರನ್‌ ತೊರೆಯಲ್ಲಿ ಖರ್ಜೂರದ ಮರಗಳು

ಇಸ್ರಾಯೇಲ್ಯರು ಈಜಿಪ್ಟಿನಿಂದ ಬರುವಾಗ ತಮ್ಮ ಜೊತೆ ಹಿಟ್ಟನ್ನ, ಹಿಟ್ಟು ನಾದೋ ಪಾತ್ರೆಯನ್ನ ಅಷ್ಟೇ ಅಲ್ಲ ಎಣ್ಣೆಯನ್ನ ಮತ್ತು ಸ್ವಲ್ಪ ಕಾಳುಗಳನ್ನ ತಗೊಂಡು ಬಂದ್ರು. ಆದ್ರೆ ಇದೆಲ್ಲ ತುಂಬ ದಿನಕ್ಕೆ ಸಾಕಾಗ್ತಿರ್ಲಿಲ್ಲ. ಅಷ್ಟೇ ಅಲ್ಲ ಅವರು “ಪ್ರಾಣಿಗಳ ದೊಡ್ಡ ಹಿಂಡನ್ನೂ” ತಮ್ಮ ಜೊತೆ ಕರ್ಕೊಂಡು ಬಂದ್ರು. (ವಿಮೋ. 12:34-39) ಕಾಡಲ್ಲಿ ತುಂಬ ಕಷ್ಟ ಆಗ್ತಿದ್ರಿಂದ ಕೆಲವು ಪ್ರಾಣಿಗಳು ಸತ್ತು ಹೋದ್ವು. ಇನ್ನು ಕೆಲವನ್ನ ಅವರು ತಿಂದ್ರು. ಅಷ್ಟೇ ಅಲ್ಲ ಕೆಲವೊಂದನ್ನು ಬಲಿಯಾಗಿ ಅರ್ಪಿಸಿದ್ರು. ಸುಳ್ಳು ದೇವರುಗಳಿಗೆ ಬಲಿ ಕೊಟ್ರು. b (ಅ. ಕಾ. 7:39-43) ಅವ್ರ ನಂಬಿಕೆ ಕಡಿಮೆ ಆಗಿದ್ರ ಬಗ್ಗೆ ಯೆಹೋವ ಹೇಳುವಾಗ “ನಿಮ್ಮ ಮಕ್ಕಳು ಈ ಕಾಡಲ್ಲಿ 40 ವರ್ಷ ತನಕ ಕುರುಬರಾಗಿ ಇರ್ತಾರೆ” ಅಂದನು. ಇದ್ರಿಂದ ಇಸ್ರಾಯೇಲ್ಯರ ಹತ್ರ ಇನ್ನೂ ಕೆಲವು ಪ್ರಾಣಿಗಳು ಹಾಗೂ ಮರಿಗಳಿತ್ತು ಅಂತ ಗೊತ್ತಾಗುತ್ತೆ. (ಅರ. 14:33) ಹಾಗಾಗಿ ಆ ಪ್ರಾಣಿಗಳಿಂದ ಹಾಲು ಮತ್ತು ಮಾಂಸ ಸಿಕ್ತಿತ್ತು. ಆದ್ರೆ 40 ವರ್ಷದ ತನಕ ಸುಮಾರು 30 ಲಕ್ಷ ಜನ್ರಿಗೆ ಅದು ಸಾಕಾಗ್ತಿರ್ಲಿಲ್ಲ. c

ಪ್ರಾಣಿಗಳಿಗೆ ಆಹಾರ ಮತ್ತು ನೀರು ಎಲ್ಲಿ ಸಿಗ್ತಿತ್ತು? d ಕಾಡಲ್ಲಿ ತುಂಬ ಮಳೆ ಬರ್ತಾ ಇದ್ದಿದ್ರಿಂದ ಗಿಡ ಮರಗಳೆಲ್ಲಾ ದಟ್ಟವಾಗಿ ಬೆಳೆದಿತ್ತು. ಶಾಸ್ತ್ರಗಳ ಒಳನೋಟ ಸಂಪುಟ 1ರಲ್ಲಿ ಹೀಗೆ ಹೇಳುತ್ತೆ: 3,500 ವರ್ಷಗಳ ಹಿಂದೆ “ಅರೇಬಿಯಾದಲ್ಲಿ ಈಗಿರೋದಕ್ಕಿಂತ ತುಂಬ ನೀರಿತ್ತು. ಅಲ್ಲಿರೋ ಆಳವಾಗಿರೋ ಮತ್ತು ಬರಡಾಗಿರೋ ಕಣಿವೆಗಳನ್ನು ನೋಡುವಾಗ ಹಿಂದೆ ತುಂಬ ನೀರಿತ್ತು ಮತ್ತು ತೊರೆಗಳಿತ್ತು ಅಂತ ಹೇಳಬಹುದು.” ಹಾಗಿದ್ರೂ ಅದು ಮರುಭೂಮಿ ಆಗಿದ್ರಿಂದ ನೀರು ಬತ್ತಿಹೋಗಿತ್ತು ಮತ್ತು ಆ ಜಾಗ ಸುರಕ್ಷಿತವಾಗೂ ಇರ್ಲಿಲ್ಲ. (ಧರ್ಮೋ. 8:14-16) ಅದಕ್ಕೆ ಯೆಹೋವ ದೇವರು ಅವ್ರಿಗೆ ಅದ್ಭುತವಾಗಿ ನೀರು ಕೊಟ್ಟನು. ಇದ್ರಿಂದ ಇಸ್ರಾಯೇಲ್ಯರು ಮತ್ತು ಪ್ರಾಣಿಗಳು ಜೀವಂತವಾಗಿ ಉಳಿಯೋಕೆ ಆಯ್ತು.—ವಿಮೋ. 15:22-25; 17:1-6; ಅರ. 20:2, 11.

“ಮನುಷ್ಯ ಬರೀ ಆಹಾರ ತಿನ್ನೋದ್ರಿಂದ ಅಲ್ಲ ಯೆಹೋವನ ಬಾಯಿಂದ ಬರೋ ಪ್ರತಿಯೊಂದು ಮಾತಿಂದ ಬದುಕ್ತಾನೆ” ಅಂತ ತೋರಿಸೋಕೆ ಯೆಹೋವ ಇಸ್ರಾಯೇಲ್ಯರಿಗೆ ಮನ್ನ ಕೊಟ್ಟನು ಅನ್ನೋದನ್ನ ಮೋಶೆ ಅವ್ರಿಗೆ ಅರ್ಥ ಮಾಡಿಸಿದನು.—ಧರ್ಮೋ. 8:3.

a ಆಗಸ್ಟ್‌ 1, 1992ರ ಕಾವಲಿನಬುರುಜುವಿನ ಪುಟ 24-25 ನೋಡಿ.

b ಇಸ್ರಾಯೇಲ್ಯರು ಕಾಡಲ್ಲಿದ್ದಾಗ ಯೆಹೋವನಿಗೆ ಎರಡು ಸಲ ಬಲಿ ಅರ್ಪಿಸಿದ್ರ ಬಗ್ಗೆ ಬೈಬಲ್‌ ಹೇಳುತ್ತೆ. ಮೊದಲನೇದು ಪುರೋಹಿತರನ್ನ ನೇಮಿಸಿದಾಗ. ಎರಡನೇದು, ಪಸ್ಕ ಆಚರಿಸಿದಾಗ. ಇದು ಕ್ರಿಸ್ತ ಪೂರ್ವ 1512ರಲ್ಲಿ ಅಂದ್ರೆ ಇಸ್ರಾಯೇಲ್ಯರು ಈಜಿಪ್ಟನ್ನ ಬಿಟ್ಟುಬಂದ ಎರಡನೇ ವರ್ಷದಲ್ಲಿ ನಡೀತು.—ಯಾಜ. 8:14–9:24; ಅರ. 9:1-5.

c ಇಸ್ರಾಯೇಲ್ಯರು 40 ವರ್ಷದ ಕೊನೆಯಲ್ಲಿ ಯುದ್ಧ ಮಾಡುವಾಗ “ಕೊಳ್ಳೆಹೊಡೆದು” ಸಾವಿರಾರು ಪ್ರಾಣಿಗಳನ್ನ ತಗೊಂಡು ಬಂದ್ರು. (ಅರ. 31:32-34) ಹಾಗಿದ್ರೂ ಅವರು ದೇವರು ಮಾತು ಕೊಟ್ಟ ದೇಶಕ್ಕೆ ಹೋಗೋ ತನಕ ಮನ್ನಾನೇ ತಿಂತಾ ಇದ್ರು.—ಯೆಹೋ. 5:10-12.

d ಪ್ರಾಣಿಗಳು ಮನ್ನ ತಿಂತಿದ್ವು ಅಂತ ನಾವು ಹೇಳೋಕಾಗಲ್ಲ. ಯಾಕಂದ್ರೆ ಯೆಹೋವ ದೇವರು ಇಸ್ರಾಯೇಲ್ಯರಿಗೆ ತಮಗೆಷ್ಟು ಬೇಕೋ ಅಷ್ಟು ಮಾತ್ರ ಮನ್ನ ತಗೊಬೇಕು ಅಂತ ಹೇಳಿದ್ದನು.—ವಿಮೋ. 16:15, 16.