ಮಾಹಿತಿ ಇರುವಲ್ಲಿ ಹೋಗಲು

ನಾನು ಒಬ್ಬ ಯೆಹೋವನ ಸಾಕ್ಷಿಯಾಗಲು ಏನು ಮಾಡಬೇಕು?

ನಾನು ಒಬ್ಬ ಯೆಹೋವನ ಸಾಕ್ಷಿಯಾಗಲು ಏನು ಮಾಡಬೇಕು?

 ಯೆಹೋವನ ಸಾಕ್ಷಿಯಾಗಲು ಒಬ್ಬ ವ್ಯಕ್ತಿ ತೆಗೆದುಕೊಳ್ಳಬೇಕಾದ ಹೆಜ್ಜೆಗಳ ಬಗ್ಗೆ ಯೇಸು ಮತ್ತಾಯ 28:19, 20ರಲ್ಲಿ ಹೇಳಿದ್ದಾನೆ. ಈ ವಚನದಲ್ಲಿ ಒಬ್ಬ ವ್ಯಕ್ತಿ ಕ್ರಿಸ್ತನ ಶಿಷ್ಯನಾಗುವುದರಲ್ಲಿ ಯೆಹೋವನ ಬಗ್ಗೆ ಮಾತಾಡುವುದು ಅಥವಾ ಸಾಕ್ಷಿಕೊಡುವುದು ಒಳಗೂಡಿದೆ ಎಂದು ತಿಳಿಸಲಾಗಿದೆ.

 ಹೆಜ್ಜೆ 1: ಬೈಬಲ್‌ ಬೋಧನೆಗಳನ್ನು ಕಲಿಯಿರಿ. ಯೇಸು ತನ್ನ ಶಿಷ್ಯರಿಗೆ ‘ಶಿಷ್ಯರನ್ನಾಗಿ ಮಾಡಿರಿ . . . ಅವರಿಗೆ ಬೋಧಿಸಿರಿ’ ಎಂದು ಹೇಳಿದನು. (ಮತ್ತಾಯ 28:19, 20) “ಶಿಷ್ಯ” ಎಂಬ ಪದದ ಅರ್ಥ “ಕಲಿಯುವವನು” ಎಂದಾಗಿದೆ. ಯೇಸು ಕ್ರಿಸ್ತನ ಬೋಧನೆಗಳಲ್ಲಿ ಮುಖ್ಯವಾಗಿ ನಾವು ಸಂತೋಷ ಮತ್ತು ಅರ್ಥಭರಿತ ಜೀವನ ನಡೆಸಲು ಅಗತ್ಯವಿರುವ ಮಾಹಿತಿ ಇದೆ. (2 ತಿಮೊಥೆಯ 3:16, 17) ಬೈಬಲ್‌ ಏನು ಬೋಧಿಸುತ್ತದೆ ಎಂದು ಉಚಿತವಾದ ಬೈಬಲ್‌ ಅಧ್ಯಯನದ ಮೂಲಕ ತಿಳಿಸಲು ನಾವು ಸಂತೋಷಿಸುತ್ತೇವೆ.—ಮತ್ತಾಯ 10:7, 8; 1 ಥೆಸಲೊನೀಕ 2:13.

 ಹೆಜ್ಜೆ 2: ಕಲಿತದ್ದನ್ನು ಅನ್ವಯಿಸಿ. ಕಲಿತವರೆಲ್ಲರೂ ‘ಆತನು [ಯೇಸು] ಆಜ್ಞಾಪಿಸಿದ ಎಲ್ಲಾ ವಿಷಯಗಳನ್ನು ಪಾಲಿಸುವಂತೆ’ ಯೇಸು ಹೇಳಿದನು. (ಮತ್ತಾಯ 28:20) ಇದರರ್ಥ, ಕೇವಲ ಬೈಬಲ್‌ ಜ್ಞಾನ ಪಡೆಯುವುದಲ್ಲ. ಆ ಜ್ಞಾನ ನಿಮ್ಮ ಯೋಚನೆ ಮತ್ತು ನಡತೆಯಲ್ಲಿ ಮುಖ್ಯವಾದ ಬದಲಾವಣೆಗಳನ್ನು ಮಾಡುವಂತೆ ಪ್ರೇರಿಸಬೇಕು. (ಅಪೊಸ್ತಲರ ಕಾರ್ಯಗಳು 10:42; ಎಫೆಸ 4:22-29; ಇಬ್ರಿಯ 10:24, 25) ಯೇಸುವಿನ ಆಜ್ಞೆಗಳನ್ನು ಪಾಲಿಸುವವರೆಲ್ಲರೂ ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳಲು ವೈಯಕ್ತಿಕ ನಿರ್ಣಯವನ್ನು ಮಾಡಲು ಮನಸ್ಸು ಮಾಡುತ್ತಾರೆ.—ಮತ್ತಾಯ 16:24.

 ಹೆಜ್ಜೆ 3: ದೀಕ್ಷಾಸ್ನಾನ ಪಡೆಯಿರಿ. (ಮತ್ತಾಯ 28:19) ಬೈಬಲ್‌ನಲ್ಲಿ, ದೀಕ್ಷಾಸ್ನಾನವನ್ನು ಹೂಣಲ್ಪಡುವುದಕ್ಕೆ ಹೋಲಿಸಲಾಗಿದೆ. (ರೋಮನ್ನರಿಗೆ 6:2-4 ಹೋಲಿಸಿ) ಸಾಂಕೇತಿಕವಾಗಿ, ಇದು ನಾವು ನಮ್ಮ ಹಿಂದಿನ ಜೀವನಮಾರ್ಗದ ಸಂಬಂಧದಲ್ಲಿ ಸತ್ತು ಮತ್ತೆ ಹೊಸ ಜೀವನವನ್ನು ಶುರುಮಾಡುತ್ತೇವೆ ಎಂಬುದನ್ನು ಸೂಚಿಸುತ್ತದೆ. ಯೇಸು ಹೇಳಿದ ಮೊದಲೆರಡು ಹೆಜ್ಜೆಗಳನ್ನು ನೀವು ಪೂರೈಸಿದ್ದೀರೆಂದು ಮತ್ತು ಶುದ್ಧ ಮನಸ್ಸಾಕ್ಷಿಗಾಗಿ ಬೇಡುತ್ತಿದ್ದೀರೆಂದು ನಿಮ್ಮ ದೀಕ್ಷಾಸ್ನಾನವು ಬಹಿರಂಗವಾಗಿ ತೋರ್ಪಡಿಸುತ್ತದೆ.—ಇಬ್ರಿಯ 9:14; 1 ಪೇತ್ರ 3:21.

ನಾನು ದೀಕ್ಷಾಸ್ನಾನಕ್ಕೆ ತಯಾರಾಗಿದ್ದೀನಿ ಎಂದು ನನಗೆ ಹೇಗೆ ಗೊತ್ತಾಗುತ್ತೆ?

 ಸಭೆಯ ಹಿರಿಯರ ಹತ್ತಿರ ಮಾತಾಡಿ. ಇದರಲ್ಲಿ ಏನೆಲ್ಲಾ ಒಳಗೂಡಿದೆ ಎಂದು ನಿಮಗೆ ಅರ್ಥವಾಗಿದೆಯಾ, ಕಲಿತದ್ದನ್ನು ಅನ್ವಯಿಸುತ್ತಿದ್ದೀರಾ ಮತ್ತು ಸ್ವಇಷ್ಟದಿಂದಲೇ ನೀವು ದೇವರಿಗೆ ನಿಮ್ಮನ್ನು ಸಮರ್ಪಿಸಿಕೊಂಡಿದ್ದೀರಾ ಎಂದು ಮಾತಾಡಿ ತಿಳಿದುಕೊಳ್ಳುವರು.—ಅಪೊಸ್ತಲರ ಕಾರ್ಯಗಳು 20:28; 1 ಪೇತ್ರ 5:1-3.

ಸಾಕ್ಷಿ ಹೆತ್ತವರ ಮಕ್ಕಳಿಗೂ ಈ ಹೆಜ್ಜೆಗಳು ಅನ್ವಯಿಸುತ್ತಾ?

 ಹೌದು. ಬೈಬಲ್‌ ಹೇಳುವಂತೆ ನಾವು ಮಕ್ಕಳನ್ನು ‘ಯೆಹೋವನ ಶಿಸ್ತಿನಲ್ಲಿ ಮಾನಸಿಕ ಕ್ರಮಪಡಿಸುವಿಕೆಯಲ್ಲಿ’ ಬೆಳೆಸುತ್ತೇವೆ. (ಎಫೆಸ 6:4) ಆದರೆ, ಮಕ್ಕಳು ದೀಕ್ಷಾಸ್ನಾನಕ್ಕೆ ಅರ್ಹರಾಗುವ ಮುಂಚೆ, ಅವರು ದೊಡ್ಡವರಾದಂತೆ ಬೈಬಲ್‌ ಬಗ್ಗೆ ಕಲಿಯಲು, ಅಂಗೀಕರಿಸಲು ಮತ್ತು ಅನ್ವಯಿಸಲು ಸ್ವಂತ ನಿರ್ಧಾರ ಮಾಡಬೇಕು. (ರೋಮನ್ನರಿಗೆ 12:2) ಅಂತಿಮವಾಗಿ, ಆರಾಧನೆ ವಿಷಯದಲ್ಲಿ ಪ್ರತಿಯೊಬ್ಬರು ತಮ್ಮ ಸ್ವಂತ ನಿರ್ಣಯ ಮಾಡಬೇಕು.—ರೋಮನ್ನರಿಗೆ 14:12; ಗಲಾತ್ಯ 6:5.