ಮಾಹಿತಿ ಇರುವಲ್ಲಿ ಹೋಗಲು

ಈ ಹಿಂದೆ ತಮ್ಮ ಧರ್ಮದ ವ್ಯಕ್ತಿಗಳಾಗಿದ್ದವರನ್ನು ಯೆಹೋವನ ಸಾಕ್ಷಿಗಳು ಬಹಿಷ್ಕರಿಸುತ್ತಾರಾ?

ಈ ಹಿಂದೆ ತಮ್ಮ ಧರ್ಮದ ವ್ಯಕ್ತಿಗಳಾಗಿದ್ದವರನ್ನು ಯೆಹೋವನ ಸಾಕ್ಷಿಗಳು ಬಹಿಷ್ಕರಿಸುತ್ತಾರಾ?

 ಈ ಹಿಂದೆ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾಗಿದ್ದ ವ್ಯಕ್ತಿ ಈಗ ಸುವಾರ್ತೆ ಸಾರುವುದನ್ನು ನಿಲ್ಲಿಸಿಬಿಟ್ಟರೆ ಅಥವಾ ಜೊತೆ ಆರಾಧಕರಿಂದ ದೂರ ಸರಿದರೆ ಅಂಥವರನ್ನು ನಾವು ಬಹಿಷ್ಕರಿಸುವುದಿಲ್ಲ. ಬದಲಿಗೆ, ಅಂಥವರನ್ನು ಹುಡುಕಿ ನಂದಿಹೊಗಿರುವ ಅವರ ಆಧ್ಯಾತ್ಮಿಕ ಆಸಕ್ತಿಯನ್ನು ಪುನಃ ಹೊತ್ತಿಸಲು ಪ್ರಯತ್ನಿಸುತ್ತೇವೆ.

 ಮಾತ್ರವಲ್ಲ ಒಬ್ಬ ವ್ಯಕ್ತಿ ಗಂಭೀರ ಪಾಪ ಮಾಡಿದ್ದಾನೆ ಎಂದ ಮಾತ್ರಕ್ಕೆ ಅವನನ್ನು ಬಹಿಷ್ಕರಿಸುವುದೂ ಇಲ್ಲ. ಆದರೆ ದೀಕ್ಷಾಸ್ನಾನ ಪಡೆದಿರುವ ಒಬ್ಬ ವ್ಯಕ್ತಿ ಬೈಬಲಿನ ನೈತಿಕ ನಿಯಮಗಳನ್ನು ಮುರಿಯುವ ರೂಢಿ ಮಾಡಿಕೊಂಡು ಯಾವುದೇ ಪಶ್ಚಾತ್ತಾಪ ಪಡದಿದ್ದರೆ ಅಂಥವನನ್ನು ಸಭೆಯಿಂದ ಬಹಿಷ್ಕರಿಸಲಾಗುತ್ತದೆ. ಬೈಬಲ್‌ ಸ್ಪಷ್ಟವಾಗಿ ಹೇಳುವುದು: “ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಿರಿ.”—1 ಕೊರಿಂಥ 5:13.

 ಬಹಿಷ್ಕರಿಸಲಾದ ವ್ಯಕ್ತಿಯ ಹೆಂಡತಿ, ಮಕ್ಕಳು ಯೆಹೋವನ ಸಾಕ್ಷಿಗಳಾಗಿರುವಲ್ಲಿ ಆಗೇನು? ಕುಟುಂಬದೊಂದಿಗೆ ಅವನಿಗಿದ್ದ ಆಧ್ಯಾತ್ಮಿಕ ಸಂಬಂಧ ಬದಲಾಗುವುದು. ಆದರೆ ರಕ್ತ ಸಂಬಂಧ ಮಾತ್ರ ಹಾಗೇ ಇರುತ್ತದೆ. ಆತನ ಮದುವೆ ಸಂಬಂಧ, ಕುಟುಂಬದ ಕಡೆಗಿನ ಭಾವನೆಗಳು ಮತ್ತು ವ್ಯವಹಾರ ಮುಂದುವರಿಯುತ್ತದೆ.

 ಬಹಿಷ್ಕರಿಸಲ್ಪಟ್ಟವರು ನಮ್ಮ ಆರಾಧನಾ ಕೂಟಕ್ಕೆ ಹಾಜರಾಗಬಹುದು. ಅವರು ಬಯಸುವಲ್ಲಿ ಸಭೆಯ ಹಿರಿಯರಿಂದ ಆಧ್ಯಾತ್ಮಿಕ ಸಲಹೆಗಳನ್ನೂ ಪಡೆದುಕೊಳ್ಳಬಹುದು. ಅವರು ಪುನಃ ಒಬ್ಬ ಯೆಹೋವನ ಸಾಕ್ಷಿಯಾಗುವ ಅರ್ಹತೆಯನ್ನು ಪಡೆದುಕೊಳ್ಳಬೇಕು ಎನ್ನುವುದೇ ನಮ್ಮ ಮುಖ್ಯ ಉದ್ದೇಶ. ಬಹಿಷ್ಕರಿಸಲ್ಪಟ್ಟವರು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು, ಬೈಬಲ್‌ ಮೂಲತತ್ವಗಳ ಪ್ರಕಾರ ನಡೆಯುವ ನಿಜ ಬಯಕೆಯನ್ನು ಕ್ರಿಯೆಯಲ್ಲಿ ವ್ಯಕ್ತಪಡಿಸುವುದಾದರೆ ಅಂಥವರು ಪುನಃ ಯೆಹೋವನ ಸಾಕ್ಷಿಯಾಗಬಹುದು.