ಮಾಹಿತಿ ಇರುವಲ್ಲಿ ಹೋಗಲು

ಜೋಸೆಫ್‌ಗೆ ಪೊಲೀಸರಿಂದ ಸಹಾಯ

ಜೋಸೆಫ್‌ಗೆ ಪೊಲೀಸರಿಂದ ಸಹಾಯ

ನೀವೊಬ್ಬ ಯೆಹೋವನ ಸಾಕ್ಷಿಯಾಗಿದ್ರೆ, ಪೊಲೀಸ್‌ ಸಹಾಯದಿಂದ ನೀವು ಮನೆ-ಮನೆಗೆ ಹೋಗಿ ಸುವಾರ್ತೆ ಸಾರೋದನ್ನ ಉಹಿಸ್ಕೊಳ್ಳಬಲ್ಲಿರಾ? ಈ ಒಂದು ಅನುಭವ ಜೋಸೆಫ್‌ಗೆ 2017 ರಲ್ಲಿ ಮೈಕ್ರೋನೇಷಿಯದಲ್ಲಿ ಆಯ್ತು. ಇವರು ಮತ್ತು ಇವ್ರ ಜೊತೆ ಮೂವರು ಸಾಕ್ಷಿಗಳು ದೂರದಲ್ಲಿದ್ದ ದ್ವೀಪಗಳ ಜನ್ರಿಗೆ ಸಾರೋಕೆ ವಿಶೇಷ ಅಭಿಯಾನದಲ್ಲಿ ಪಾಲ್ಗೊಂಡ್ರು.

ಮಧ್ಯಾಹ್ನದಷ್ಟಕ್ಕೆ, ಈ ನಾಲ್ಕೂ ಸಾಕ್ಷಿಗಳು ಸುಮಾರು 600 ಜನ್ರಿದ್ದ ಒಂದು ಚಿಕ್ಕ ದ್ವೀಪಕ್ಕೆ ಬಂದ್ರು. ಆಗ ಅಲ್ಲಿನ ಮೇಯರ್‌ ಸಮುದ್ರದ ಹತ್ರ ಬಂದು ಇವ್ರನ್ನ ಸ್ವಾಗತಿಸಿದ. ಆಮೇಲೆ ಏನಾಯ್ತು ಅಂತ ಜೋಸೆಫ್‌ ಹೇಳ್ತಾನೆ: “ನೀವು ಎಲ್ಲ ಮನೆಗಳಿಗೆ ಪೊಲೀಸ್‌ ಗಾಡಿಯಲ್ಲೇ ಹೋಗಿ ಅಂತ ಮೇಯರ್‌ ಹೇಳಿದ್ರು. ಇದನ್ನ ಕೇಳಿ ನಮ್ಗೆ ಆಶ್ಚರ್ಯ ಆಯ್ತು. ಆದ್ರೆ ಗೌರವದಿಂದ ಬೇಡ ಅಂದ್ವಿ. ಯಾಕಂದ್ರೆ ನಾವು ಮನೆ-ಮನೆ ಸೇವೆಗೆ ಸಾಮಾನ್ಯ ರೀತಿಯಲ್ಲೇ ಹೋಗೋಕೆ ಬಯಸಿದ್ವಿ.”

ನಂತ್ರ ಪ್ರಚಾರಕರು ಆದಷ್ಟು ಜನ್ರಿಗೆ ಭೇಟಿ ಮಾಡೋಕೆ ನಡೆಯಲು ಆರಂಭಿಸಿದ್ರು. ಸಾಕ್ಷಿಗಳು ಹೀಗೆ ಹೇಳ್ತಾರೆ: “ಅಲ್ಲಿನ ಜನ್ರು ಸ್ನೇಹಪರರು, ನಾವು ಹೇಳೋ ಸಂದೇಶವನ್ನ ಆಸಕ್ತಿಯಿಂದ ಕೇಳ್ತಿದ್ರು. ಹಾಗಾಗಿ ನಾವು ಪ್ರತಿ ಮನೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಸಮಯ ಕಳೆದೆವು.”

ಆ ದಿನ ಜೋಸೆಫ್‌ ಇದ್ದ ಸ್ಥಳದಿಂದ ಎರಡು ಸಾರಿ ಪೊಲೀಸ್‌ ಗಾಡಿ ಪಾಸ್‌ ಆಯ್ತು. ಮೂರನೇ ಸಲ ನಿಲ್ಲಿಸೇಬಿಟ್ರು. ಪೊಲೀಸ್‌ ಜೋಸೆಫ್‌ಗೆ ಮುಂದಿನ ಮನೆಗಳಿಗೆ ನಾವೇ ಗಾಡಿಯಲ್ಲಿ ಬಿಡ್ತೀವಿ ಅಂತ ಹೇಳಿದ್ರು. ಅದಕ್ಕೆ ಜೋಸೆಫ್‌ ಬೇಡ ಅಂದ. ಆಮೇಲೆ ಏನಾಯ್ತು ಅಂತ ಜೋಸೆಫ್‌ ಹೇಳ್ತಾನೆ: “ಈ ಸಲ ಅವ್ರು ಸುಮ್ಮನೆ ಇರಲಿಲ್ಲ. ಅವ್ರು ನನ್ಗೆ, ‘ಇನ್ನು ಸ್ವಲ್ಪ ಹೊತ್ತಲ್ಲಿ ನೀವು ಇಲ್ಲಿಂದ ಹೊರಡಬೇಕಲ್ವಾ. ಹಾಗಾಗಿ ಉಳಿದಿರೋ ಮನೆಗಳಿಗೆ ನಾವು ಕರಕೊಂಡು ಹೋಗ್ತಿವಿ’ ಅಂದ್ರು. ನಾವು ಇನ್ನೂ ತುಂಬ ಮನೆಗಳಿಗೆ ಭೇಟಿ ಮಾಡೋಕೆ ಇದಿದ್ರಿಂದ ನಾವು ಅವ್ರಿಗೆ ಪುನಃ ಬೇಡ ಅನ್ನಲಿಲ್ಲ. ನಾವು ಪ್ರತಿ ಮನೆಗೆ ಹೋದಾಗ ಆ ಮನೆಯಲ್ಲಿದ್ದ ಕುಟುಂಬದವ್ರ ಹೆಸ್ರನ್ನ ಪೊಲೀಸರು ಹೇಳ್ತಿದ್ರು. ಅಲ್ಲದೇ ನೀವು ಬಾಗಿಲನ್ನ ತಟ್ಟಿದಾಗ ಯಾರೂ ಹೊರಗೆ ಬಂದಿಲ್ಲ ಅಂದ್ರೆ ಮನೆಯವರನ್ನ ಕರೆಯೋಕೆ ನಾವು ಹಾರ್ನ್‌ ಹಾಕ್ತಿವಿ ಅಂದ್ರು.

“ಈ ಸಹಾಯದಿಂದ ಆ ದಿನ ಎಲ್ಲ ಮನೆಗಳಿಗೂ ನಾವು ಭೇಟಿ ಮಾಡೋಕೆ ಆಯ್ತು. ನಾವು ತುಂಬ ಸಾಹಿತ್ಯಗಳನ್ನ ಜನ್ರಿಗೆ ಕೊಟ್ಟಿದ್ವಿ ಮತ್ತು ಆಸಕ್ತ ಜನ್ರಿಗೆ ಪುನಃ ಭೇಟಿ ಮಾಡೋಕೆ ಏರ್ಪಾಡು ಮಾಡಿದ್ವಿ.”

ಆ ಪೊಲೀಸ್‌ ಅಧಿಕಾರಿ ಜೋಸೆಫ್‌ಗೆ, “ನೀವು ಸಿಹಿ ಸುದ್ದಿ ಸಾರಿದ್ದನ್ನ ನೋಡಿ ನಮ್ಗೆ ಸಂತೋಷ ಆಯ್ತು” ಅಂತ ಹೇಳಿದ್ರು. ಸಾಯಂಕಾಲ ಸಾಕ್ಷಿಗಳು ಅಲ್ಲಿಂದ ಹೊರಡುವಾಗ ಆ ಅಧಿಕಾರಿಗಳು ಸಮುದ್ರದ ಹತ್ರ ನಿಂತ್ಕೊಂಡು ಕೈಯಲ್ಲಿ ಬೈಬಲ್‌ ಸಾಹಿತ್ಯಗಳನ್ನ ಹಿಡ್ಕೊಂಡು ಖುಷಿಯಿಂದ ಬಾಯ್‌ ಮಾಡಿದ್ರು.