ಮಾಹಿತಿ ಇರುವಲ್ಲಿ ಹೋಗಲು

ಅವರ ಬಟ್ಟೆ ಮೇಲೆ ಪರ್ಪಲ್‌ ಟ್ರೈಯಾಂಗಲ್‌

ಅವರ ಬಟ್ಟೆ ಮೇಲೆ ಪರ್ಪಲ್‌ ಟ್ರೈಯಾಂಗಲ್‌

ಫ್ರಾನ್ಸ್‌ನಲ್ಲಿರೋ ಮೋಡ್‌ ಒಂದು ಸ್ಕೂಲಲ್ಲಿ ಕೆಲಸ ಮಾಡ್ತಾಳೆ. ಪಾಠ ನಡೆಯುವಾಗ ಅಂಗವಿಕಲ ಮಕ್ಕಳಿಗೆ ಸಹಾಯ ಮಾಡೋದೇ ಅಲ್ಲಿ ಅವಳ ಕೆಲಸ. ಇತ್ತೀಚೆಗೆ ಒಂದು ಕ್ಲಾಸ್‌ನಲ್ಲಿ ನಾಜಿ಼ ಸೆರೆಶಿಬಿರ ಮತ್ತು ಹತ್ಯಕಾಂಡದ ಬಗ್ಗೆ ಪಾಠ ನಡಿತಿತ್ತು. ನಾಜಿ಼ ಸೆರೆಶಿಬಿರಗಳಲ್ಲಿ ಸೆರೆವಾಸಿಗಳು ಹಾಕ್ತಿದ್ದ ಯೂನಿಫಾರಂ ಮೇಲೆ ಒಂದೊಂದು ತುಂಡು ಬಟ್ಟೆಯನ್ನು ಹೊಲಿಯಲಾಗಿತ್ತು. ಒಂದೊಂದು ತುಂಡುಬಟ್ಟೆಯ ಬಣ್ಣ ಮತ್ತು ಆಕಾರ ಬೇರೆ ಬೇರೆಯಾಗಿತ್ತು. ಒಬ್ಬನ ಬಟ್ಟೆ ಮೇಲಿರೋ ತುಂಡು ಬಟ್ಟೆಯ ಬಣ್ಣ ಮತ್ತು ಆಕಾರ ನೋಡಿ ಅವನನ್ನ ಯಾಕೆ ಸೆರೆಗೆ ಹಾಕಲಾಗಿದೆ ಅಂತ ತಿಳ್ಕೊಬಹುದಿತ್ತು.

ಕೆಲವು ಸೆರೆವಾಸಿಗಳ ಬಟ್ಟೆ ಮೇಲೆ ನೇರಳೆ ಬಣ್ಣದ ತ್ರಿಕೋನ ತುಂಡು (ಪರ್ಪಲ್‌ ಟ್ರೈಯಾಂಗಲ್‌) ಇತ್ತು. ಅವರ ಬಗ್ಗೆ ಹೇಳ್ತಾ ಟೀಚರ್‌ “ಅವರು ಸಲಿಂಗಿಗಳಾಗಿರಬೇಕು ಅಂತ ನೆನಸ್ತೇನೆ” ಅಂದ್ರು. ಕ್ಲಾಸ್‌ ಮುಗಿದ ಮೇಲೆ ಮೋಡ್‌ ಇದ್ರ ಬಗ್ಗೆ ಟೀಚರ್‌ ಹತ್ರ ಮಾತಾಡಿದಳು. ನಾಜಿ಼ಗಳು ಯೆಹೋವನ ಸಾಕ್ಷಿಗಳನ್ನ ಗುರುತಿಸಲಿಕ್ಕೆ ಅವರ ಬಟ್ಟೆ ಮೇಲೆ ಪರ್ಪಲ್‌ ಟ್ರೈಯಾಂಗಲ್‌ ಹಾಕಿದ್ರು, a ಈ ವಿಷ್ಯದ ಬಗ್ಗೆ ಹೆಚ್ಚು ಮಾಹಿತಿ ಹೇಳ್ತೇನೆ ಅಂತ ಟೀಚರ್‌ಗೆ ಹೇಳಿದಳು. ಅದಕ್ಕೆ ಟೀಚರ್‌ ಸರಿ ಅಂತ ಹೇಳಿ ಮಕ್ಕಳಿಗೂ ಆ ಮಾಹಿತಿನ ತಿಳಿಸಬೇಕು ಅಂದ್ರು.

ಇದೇ ವಿಷ್ಯದ ಬಗ್ಗೆ ಇನ್ನೊಂದು ಕ್ಲಾಸಲ್ಲಿ ಬೇರೆ ಟೀಚರ್‌ ಒಬ್ಬರು ಪಾಠ ಮಾಡ್ತಿದ್ರು. ಆ ಟೀಚರ್‌ ಸೆರೆಶಿಬಿರಗಳಲ್ಲಿ ಇರುವವರು ತಮ್ಮ ಬಟ್ಟೆ ಮೇಲೆ ಹಾಕ್ತಿದ್ದ ವಿಧವಿಧವಾದ ಗುರುತುಗಳ ಬಗ್ಗೆ ಒಂದು ಚಾರ್ಟ್‌ ತೋರಿಸಿದ್ರು. ನೇರಳೆ ಬಣ್ಣದ ತ್ರಿಕೋನ ಯೆಹೋವನ ಸಾಕ್ಷಿಗಳನ್ನ ಗುರುತಿಸುತ್ತೆ ಅಂತ ಆ ಚಾರ್ಟಲ್ಲಿ ಸರಿಯಾಗಿ ಹೇಳಿತ್ತು. ಈ ವಿಷ್ಯದ ಬಗ್ಗೆ ಹೆಚ್ಚಿನ ಮಾಹಿತಿ ಕೊಡ್ತಿನಿ ಅಂತ ಕ್ಲಾಸ್‌ ಆದ ಮೇಲೆ ಈ ಟೀಚರಿಗೂ ಮೋಡ್‌ ಹೇಳಿದಳು. ಟೀಚರ್‌ ಇದಕ್ಕೆ ಒಪ್ಕೊಂಡು ಮಕ್ಕಳ ಮುಂದೆ ಮೋಡ್‌ ಮಾತಾಡಲಿಕ್ಕೆ ಏರ್ಪಾಡು ಮಾಡಿದಳು.

ಟೀಚರ್ಸ್‌ಗೂ ಮಕ್ಕಳಿಗೂ ತೋರಿಸಿದ ಪ್ರಕಾಶನಗಳನ್ನ ಮೋಡ್‌ ಹಿಡಿದುಕೊಂಡಿದ್ದಾಳೆ

ಮೋಡ್‌ ಮೊದಲನೇ ಕ್ಲಾಸಲ್ಲಿ 15 ನಿಮಿಷ ಮಾತಾಡಲಿಕ್ಕೆ ತಯಾರಾಗಿ ಬಂದಿದ್ದಳು. ಆದ್ರೆ ಕ್ಲಾಸಿಗೆ ಬಂದಾಗ ಟೀಚರ್‌ “ನೀನು ಒಂದು ಗಂಟೆ ಮಾತಾಡಬಹುದು” ಅಂತ ಹೇಳಿದಳು. ಮೋಡ್‌ ಆರಂಭದಲ್ಲಿ ಒಂದು ವಿಡಿಯೋ ತೋರಿಸಿದಳು. ಅದು ಯೆಹೋವನ ಸಾಕ್ಷಿಗಳಿಗೆ ನಾಜಿ಼ಗಳು ಏನೇನು ಕಷ್ಟ ಕೊಟ್ರು ಅನ್ನೋದರ ಬಗ್ಗೆ ಇತ್ತು. ಅದ್ರಲ್ಲಿ ಒಂದು ಕಷ್ಟ ಏನಂದ್ರೆ 800 ಮಕ್ಕಳನ್ನ ನಾಜಿ಼ಗಳು ಅವರ ಹೆತ್ತವರಿಂದ ದೂರ ಮಾಡಿದ್ರು. ಈ ವಿಷ್ಯ ವಿಡಿಯೋದಲ್ಲಿ ಬಂದಾಗ ಮೋಡ್‌ ಅಲ್ಲಿಗೇ ಅದನ್ನ ನಿಲ್ಲಿಸಿ, ಆ 800 ಮಕ್ಕಳಲ್ಲಿ 3 ಮಕ್ಕಳ ಅನುಭವ ಓದಿದಳು. ವಿಡಿಯೋ ಪೂರ್ತಿ ತೋರಿಸಿದ ಮೇಲೆ ಮೋಡ್‌ ಒಂದು ಪತ್ರ ಓದಿದಳು. ಅದು 1940 ರಲ್ಲಿ 19 ವರ್ಷದ ಒಬ್ಬ ಸಾಕ್ಷಿ ಬರೆದದ್ದು. ಅವನ ಹೆಸರು ಗರ್‌ಹಾರ್ಡ್‌ ಸ್ಟೈನಾಕರ್‌, ಅವನು ಆಸ್ಟ್ರಿಯ ದೇಶದವನು. ನಾಜಿ಼ಗಳು ಅವನನ್ನ ಸಾಯಿಸೋದಕ್ಕಿಂತ ಕೆಲವು ತಾಸು ಮುಂಚೆ ಅವನು ತನ್ನ ಅಪ್ಪಅಮ್ಮಗೆ ಆ ಪತ್ರ ಬರೆದಿದ್ದ. b

ಮೋಡ್‌ ಎರಡನೇ ಕ್ಲಾಸಲ್ಲೂ ಇದೇ ತರ ಮಾಡಿದಳು. ಮೋಡ್‌ ಹೀಗೆ ಧೈರ್ಯ ತೋರಿಸಿದ್ರಿಂದ ಆ ಇಬ್ಬರು ಟೀಚರ್ಸ್‌ ನಾಜಿ಼ ಸೆರೆಶಿಬಿರಗಳಲ್ಲಿ ಹಿಂಸೆ ಅನುಭವಿಸಿದವರ ಬಗ್ಗೆ ಪಾಠ ಮಾಡುವಾಗ ಯೆಹೋವನ ಸಾಕ್ಷಿಗಳ ಬಗ್ಗೆ ಖಂಡಿತ ಹೇಳೇ ಹೇಳ್ತಾರೆ.

a 2 ನೇ ಮಹಾ ಯುದ್ಧದ ಸಮಯದಲ್ಲಿ ಜರ್ಮನಿಯಲ್ಲಿದ್ದ ಯೆಹೋವನ ಸಾಕ್ಷಿಗಳು ನಾಜಿ಼ಗಳಿಗೆ ಬೆಂಬಲ ಕೊಡದಿದ್ದ ಕಾರಣ ಅವರನ್ನ ಜೈಲಿಗೆ ಹಾಕಲಾಯಿತು. (ಯೆಹೋವನ ಸಾಕ್ಷಿಗಳಿಗೆ ಆಗ ಇದ್ದ ಹೆಸರು ಬೀಬಲ್‌ ಫೋರ್ಶರ್‌ ಅಂದ್ರೆ ‘ಬೈಬಲ್‌ ವಿದ್ಯಾರ್ಥಿಗಳು.’)

b ಜರ್ಮನ್‌ ಸೈನ್ಯವನ್ನ ಸೇರಿಕೊಳ್ಳಲ್ಲ ಅಂತ ಹೇಳಿದ್ದಕ್ಕೆ ಗರ್‌ಹಾರ್ಡ್‌ ಸ್ಟೈನಾಕರ್‌ನನ್ನ ಸಾಯಿಸಲಾಯ್ತು. ಅವನು ಅಪ್ಪಅಮ್ಮಗೆ ಬರೆದ ಕೊನೆಯ ಪತ್ರದಲ್ಲಿ ಹೀಗೆ ಬರೆದನು: “ನಾನಿನ್ನೂ ಮಗು. ದೇವರು ಶಕ್ತಿ ಕೊಟ್ರೆ ಮಾತ್ರ ನನ್ನಿಂದ ಇದನ್ನ ಸಹಿಸಕ್ಕೆ ಆಗೋದು. ಅದಕ್ಕಾಗಿನೇ ನಾನು ಬೇಡ್ಕೊಳ್ತಾ ಇದ್ದೀನಿ.” ಮಾರನೇ ದಿನ ಗರ್‌ಹಾರ್ಡ್‌ನನ್ನ ಕೊಲ್ಲಲಾಯ್ತು. ಅವನ ಸಮಾಧಿ ಮೇಲಿರೋ ಕಲ್ಲಿನ ಮೇಲೆ ಹೀಗೆ ಬರೆದಿದೆ: “ದೇವರನ್ನ ಮಹಿಮೆಪಡಿಸೋಕೆ ಪ್ರಾಣಬಿಟ್ಟನು.”