ಮಾಹಿತಿ ಇರುವಲ್ಲಿ ಹೋಗಲು

ಸರಳ ಜೀವನ ಸರಿಯಾದ ತೀರ್ಮಾನ

ಸರಳ ಜೀವನ ಸರಿಯಾದ ತೀರ್ಮಾನ

ಮಾಡಿಯಾನ್‌ ಮತ್ತು ಅವನ ಹೆಂಡತಿ ಮಾರ್ಸೆಲ ಇರೋದು ಕೊಲಂಬಿಯದ ಮೆದಲಿನ್‌ ನಗರದಲ್ಲಿ. ಅವರು ಯೆಹೋವ ದೇವರನ್ನು ಆರಾಧಿಸ್ತಾರೆ. ಅವರಿಗೆ ಜೀವನದಲ್ಲಿ ಏನಕ್ಕೂ ಕಡಿಮೆ ಇರಲಿಲ್ಲ. ಕೈತುಂಬ ಸಂಬಳ ಸಿಗೋ ಕೆಲಸ ಇತ್ತು. ಸುಂದರವಾದ ಮನೆ ಇತ್ತು. ಆದ್ರೆ ಜೀವನದಲ್ಲಿ ಯಾವುದು ಮುಖ್ಯ ಅಂತ ಯೋಚನೆ ಮಾಡೋ ಹಾಗೆ ಒಂದು ವಿಷ್ಯ ನಡಿತು. ಇದ್ರ ಬಗ್ಗೆ ಗಂಡಹೆಂಡತಿ ಹೀಗೆ ಹೇಳ್ತಾರೆ: “ನಾವು 2006 ರಲ್ಲಿ, ‘ನಿಮ್ಮ ಕಣ್ಣು ನೆಟ್ಟಗಿರಲಿ’ ಎಂಬ ವಿಶೇಷ ಸಮ್ಮೇಳನಕ್ಕೆ ಹೋದ್ವಿ. ಅವತ್ತು ಎಲ್ಲ ಭಾಷಣಗಳಲ್ಲಿ ದೇವರ ಸೇವೆ ಹೆಚ್ಚು ಮಾಡಲಿಕ್ಕೆ ಸರಳ ಜೀವನ ನಡೆಸಬೇಕು ಅನ್ನೋ ವಿಷ್ಯನ ಒತ್ತಿ ಹೇಳಲಾಯಿತು. ಇದು ನಮ್ಮ ಕಣ್ತೆರೆಸಿತು. ನಾವು ಹಾಗೆ ಮಾಡ್ತಿಲ್ಲವಲ್ಲಾ ಅಂತ ಯೋಚನೆ ಮಾಡಿದ್ವಿ. ನಾವು ನೋಡಿದ್ದನ್ನೆಲ್ಲ ಕೊಂಡುಕೊಳ್ತಿದ್ವಿ. ಇದ್ರಿಂದ ಕುತ್ತಿಗೆ ವರೆಗೂ ಸಾಲ ಇತ್ತು.”

ಸಮ್ಮೇಳನದ ಭಾಷಣಗಳನ್ನು ಕೇಳಿ ಮಾಡಿಯಾನ್‌ ಅವನ ಹೆಂಡತಿ ಮಾರ್ಸೆಲ ಎಚ್ಚೆತ್ತುಕೊಂಡ್ರು. ಸರಳ ಜೀವನ ನಡೆಸಲು ಬೇಕಾದ ಬದಲಾವಣೆಗಳನ್ನು ಮಾಡಲಿಕ್ಕೆ ಶುರುಮಾಡಿದ್ರು. “ಖರ್ಚು ಕಡಿಮೆ ಮಾಡಿದ್ವಿ. ದೊಡ್ಡ ಮನೆ ಬಿಟ್ಟು ಚಿಕ್ಕ ಮನೆಗೆ ಹೋದ್ವಿ. ಕಾರು ಮಾರಿ ಒಂದು ಬೈಕ್‌ ತಂಗೊಡ್ವಿ” ಅಂತಾರೆ ಅವರು. ಕಣ್ಣಿಗೆ ಕಂಡದ್ದೆಲ್ಲ ಕೊಂಡುಕೊಳ್ಳಬೇಕು ಅನ್ನೋ ಆಸೆ ಬರದೇ ಇರಲಿಕ್ಕೆ ಅವರು ಶಾಪಿಂಗ್‌ ಮಾಲ್‌ಗಳಿಗೆ ಹೋಗದನ್ನೇ ಬಿಟ್ಟುಬಿಟ್ರು. ಬೈಬಲಲ್ಲಿರೋ ವಿಷ್ಯಗಳನ್ನ ಜನರಿಗೆ ತಿಳಿಸೋಕೆ ಹೆಚ್ಚು ಸಮಯ ಕೊಟ್ರು. ವಿಶೇಷ ಪಯನೀಯರರಾಗಿ a ಯೆಹೋವನ ಸೇವೆನ ಹುರುಪಿಂದ ಮಾಡ್ತಿದ್ದ ಸ್ನೇಹಿತರ ಜೊತೆ ಸಹವಾಸ ಮಾಡಿದ್ರು.

ಮಾಡಿಯಾನ್‌ ಮತ್ತು ಅವನ ಹೆಂಡತಿ ಮಾರ್ಸೆಲ ಯೆಹೋವನ ಸೇವೆಯನ್ನ ಹೆಚ್ಚು ಮಾಡಲಿಕ್ಕೆ ಯೋಚಿಸಿದ್ರು. ಹಾಗಾಗಿ ಹಳ್ಳಿಯಲ್ಲಿ ಸಹಾಯ ಬೇಕಾಗಿರೋ ಚಿಕ್ಕ ಸಭೆಗೆ ಹೋಗಲು ತೀರ್ಮಾನ ಮಾಡಿದ್ರು. ಇದಕೋಸ್ಕರ ಮಾಡಿಯಾನ್‌ ಕೈತುಂಬ ಸಂಬಳ ಸಿಗ್ತಿದ್ದ ಕೆಲಸನೂ ಬಿಟ್ಟ. ಇಷ್ಟು ಒಳ್ಳೇ ಕೆಲಸ ಬಿಡಲಿಕ್ಕೆ ತಲೆ ಕೆಟ್ಟಿದ್ಯಾ ಅಂತ ಅವನ ಸುಪರ್‌ವೈಸರ್‌ ನೆನಸಿದಳು. ಮಾಡಿಯಾನ್‌ ಅವಳಿಗೆ ಅರ್ಥ ಮಾಡಿಸಲಿಕ್ಕಾಗಿ, “ಮೇಡಂ, ನಿಮ್ಮ ಹತ್ರ ಬೇಕಾದಷ್ಟು ಹಣ ಇದೆ. ಆದ್ರೆ ನೀವು ಸಂತೋಷವಾಗಿದ್ದೀರಾ?” ಅಂತ ಕೇಳಿದ. ಅವಳದಕ್ಕೆ ಇಲ್ಲ, ನೂರೆಂಟು ಸಮಸ್ಯೆಗಳಿವೆ, ಬಗೆಹರಿಸೋದು ಹೇಗೆ ಅಂತಾನೇ ಗೊತ್ತಾಗ್ತಿಲ್ಲ ಅಂದಳು. ಆಗ ಅವನು, “ನಮ್ಮ ಹತ್ರ ಎಷ್ಟು ದುಡ್ಡು ಇದೆ ಅನ್ನೋದು ಮುಖ್ಯ ಅಲ್ಲ. ಸಂತೋಷವಾಗಿ ಇದ್ದೀವಾ ಅನ್ನೋದೆ ಮುಖ್ಯ. ಜನ್ರಿಗೆ ದೇವರ ಬಗ್ಗೆ ಕಲಿಸೋದ್ರಿಂದ ನನಗೂ ನನ್ನ ಹೆಂಡ್ತಿಗೂ ಸಂತೋಷ ಸಿಗುತ್ತೆ. ಇನ್ನೂ ಸಂತೋಷವಾಗಿ ಇರಬೇಕು ಅನ್ನೋದೇ ನಮ್ಮಾಸೆ. ಅದಕ್ಕೇ ಈ ಕೆಲಸನ ಇನ್ನೂ ಜಾಸ್ತಿ ಮಾಡಬೇಕು ಅಂತಿದ್ದೀವಿ” ಅಂದ.

ಮಾಡಿಯಾನ್‌ ಮತ್ತು ಅವನ ಹೆಂಡತಿ ಮಾರ್ಸೆಲ ಈಗ ಸಂತೋಷವಾಗಿದ್ದಾರೆ. ಅವರಿಗೆ ತೃಪ್ತಿ ಇದೆ. ಯಾಕಂದ್ರೆ ಅವರ ಜೀವನದಲ್ಲಿ ದೇವರ ಸೇವೆನೇ ಮುಖ್ಯ. ಕೊಲಂಬಿಯದ ವಾಯುವ್ಯ ಸಭೆಗಳಿಗೆ ಸಹಾಯ ಬೇಕಾಗಿರೋದ್ರಿಂದ ಅವರು ಅಲ್ಲಿಗೆಲ್ಲ ಹೋಗಿ 13 ವರ್ಷದಿಂದ ಸೇವೆ ಮಾಡ್ತಿದ್ದಾರೆ. ಈಗ ಅವರು ವಿಶೇಷ ಪಯನೀಯರರಾಗಿ ಸೇವೆ ಮಾಡ್ತಿದ್ದಾರೆ.

a ಯೆಹೋವನ ಸಾಕ್ಷಿಗಳ ಶಾಖಾ ಕಛೇರಿಯು ಕೆಲವು ಸ್ಥಳಗಳಲ್ಲಿ ಪೂರ್ಣ ಸಮಯ ಸುವಾರ್ತೆ ಸಾರೋಕೆ ಕೆಲವರನ್ನ ನೇಮಿಸುತ್ತದೆ. ಅವ್ರಿಗೆ ವಿಶೇಷ ಪಯನೀಯರರು ಎಂದು ಹೆಸರು. ಅವರ ಖರ್ಚಿಗೆ ಶಾಖಾ ಕಛೇರಿ ಸ್ವಲ್ಪ ದುಡ್ಡು ಕೊಡುತ್ತೆ.