ಮಾಹಿತಿ ಇರುವಲ್ಲಿ ಹೋಗಲು

ವಿಕಾಸವೇ? ವಿನ್ಯಾಸವೇ?

ಪೈಲಟ್‌ ತಿಮಿಂಗಿಲದ ಚರ್ಮ

ಪೈಲಟ್‌ ತಿಮಿಂಗಿಲದ ಚರ್ಮ

 ಹಡಗಿನ ತಳಭಾಗದಲ್ಲಿ ಬೆಳೆಯುವ ಚಿಪ್ಪುಜಂತುಗಳು (ಬಾರ್ನಕಲ್‌ಗಳು) ಮತ್ತು ಇತರ ಕಡಲ ಜೀವಿಗಳು ಹಡಗಿನ ಚಾಲಕರಿಗೆ ದೊಡ್ಡ ತಲೆನೋವಾಗಿವೆ. ಈ ಜೀವಿಗಳು ಪಾಚಿ ತರ ಕಟ್ಟಿಕೊಳ್ಳುವುದರಿಂದ ಹಡಗುಗಳ ವೇಗ ಕಡಿಮೆಯಾಗುತ್ತದೆ, ಹೆಚ್ಚು ಇಂಧನ ಖರ್ಚಾಗುತ್ತದೆ ಮತ್ತು ಎರಡು ವರ್ಷಕ್ಕೊಮ್ಮೆ ಹಡಗುಗಳನ್ನು ಶುಚಿಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಇದಕ್ಕೆ ಪರಿಹಾರ ಪ್ರಕೃತಿಯಲ್ಲಿದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

 ಪರಿಗಣಿಸಿ: ಉದ್ದ ರೆಕ್ಕೆಗಳಿರುವ ಪೈಲಟ್‌ ತಿಮಿಂಗಿಲದ (ಗ್ಲೋಬೈಸೆಫಲ ಮೆಲ್ಯಾಸ್‌) ಚರ್ಮಕ್ಕೆ ತನ್ನನ್ನು ತಾನೇ ಶುಚಿ ಮಾಡಿಕೊಳ್ಳುವ ಸಾಮರ್ಥ್ಯ ಇದೆ ಅನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಅದರ ಚರ್ಮದಲ್ಲಿ ಉಬ್ಬಿರುವ ಚಿಕ್ಕ ಚಿಕ್ಕ ಗೆರೆಗಳಿವೆ. ಇವನ್ನು “ನ್ಯಾನೋರಿಜ್ಜಸ್‌” ಎಂದು ಕರೆಯಲಾಗುತ್ತದೆ. ಈ ಉಬ್ಬುಗಳು ತುಂಬ ಚಿಕ್ಕದಿರುವುದರಿಂದ ಬಾರ್ನಕಲ್‌ಗಳ ಲಾರ್ವಗಳು ಅವುಗಳಿಗೆ ಅಂಟಿಕೊಳ್ಳುವಷ್ಟು ಜಾಗ ಇರುವುದಿಲ್ಲ. ಈ ಉಬ್ಬುಗಳ ಮಧ್ಯವಿರುವ ಜಾಗಗಳಲ್ಲಿ ಒಂದು ತರದ ಜೆಲ್‌ (ಲೋಳೆ) ಇರುತ್ತದೆ. ಈ ಜೆಲ್‌ ಪಾಚಿ ಮತ್ತು ಬ್ಯಾಕ್ಟೀರಿಯಗಳ ಮೇಲೆ ದಾಳಿ ಮಾಡುತ್ತದೆ. ತಿಮಿಂಗಿಲ ತನ್ನ ಚರ್ಮವನ್ನು ಕಳಚಿದ ಮೇಲೆ ಹೊಸ ಜೆಲ್ಲನ್ನು ಸ್ರವಿಸುತ್ತದೆ.

 ತಿಮಿಂಗಲದ ತನಗೆ ತಾನೇ ಶುಚಿಮಾಡಿಕೊಳ್ಳುವ ವಿಧಾನವನ್ನು ಹಡಗುಗಳಿಗೆ ಅಳವಡಿಸಲು ವಿಜ್ಞಾನಿಗಳು ಯೋಜಿಸಿದ್ದಾರೆ. ಹಿಂದೆ ಹಡಗುಗಳಿಗೆ ಆ್ಯಂಟಿಫೌಲಿಂಗ್‌ ಪೈಂಟನ್ನು ಬಳಿಯಲಾಗುತ್ತಿತ್ತು. ಹೆಚ್ಚು ಬಳಸಲಾಗುತ್ತಿದ್ದ ಅಂಥ ಪೈಂಟ್‌ಗಳನ್ನು ಇತ್ತೀಚಿಗೆ ನಿಷೇಧಿಸಲಾಗಿದೆ. ಯಾಕೆಂದರೆ ಅವುಗಳು ಕಡಲ ಜೀವಿಗಳಿಗೆ ವಿಷಕಾರಿಯಾಗಿವೆ. ಹಾಗಾಗಿ ಸಂಶೋಧಕರು ಒಂದು ಪರಿಹಾರ ಕಂಡುಹಿಡಿದಿದ್ದಾರೆ. ಹಡಗುಗಳ ತಳಭಾಗಕ್ಕೆ ಸ್ಟೀಲಿನ ಮೆಶ್‌ ಹಾಕಲಾಗುತ್ತದೆ. ಅದರ ಅಡಿಯಲ್ಲಿ ರಂಧ್ರವಿರುವ ಗ್ಲಾಸ್‌ ಪ್ಲೇಟ್‌ಗಳನ್ನು ಅಳವಡಿಸಲಾಗುತ್ತದೆ. ಈ ಗ್ಲಾಸ್‌ ಪ್ಲೇಟಿನಲ್ಲಿರುವ ರಂಧ್ರದಿಂದ ಕಡಲ ಜೀವಿಗಳಿಗೆ ಹಾನಿಯಾಗದಂಥ ಕೆಮಿಕಲ್‌ ಹೊರಬರುತ್ತದೆ. ಆ ಕೆಮಿಕಲ್‌ಗೆ ಸಮುದ್ರದ ನೀರು ತಾಗಿದಾಗ ಅದು ಅಂಟಂಟಾದ ಜೆಲ್‌ ರೂಪಕ್ಕೆ ತಿರುಗುತ್ತದೆ. ಇದು ಹಡಗಿನ ಇಡೀ ತಳಭಾಗವನ್ನು ಒಂದು ಪದರದಂತೆ ಆವರಿಸುತ್ತದೆ. ತುಂಬ ಸಮಯದ ನಂತರ 0.7 ಮಿಲಿಮೀಟರಿನಷ್ಟು ದಪ್ಪವಿರುವ ಈ ಪದರ ಕಿತ್ತು ಹೋಗುತ್ತದೆ. ಹೀಗೆ ಅದರ ಜೊತೆಯಲ್ಲಿ ಅದಕ್ಕೆ ಅಂಟಿಕೊಂಡಿರುವ ಜೀವಿಯೂ ಹೋಗುತ್ತದೆ. ನಂತರ ಪುನಃ ಆ ವಿಧಾನದಿಂದ ಹೊಸ ಜೆಲ್‌ ಉತ್ಪಾದನೆ ಆಗಿ ಹಡಗಿನ ತಳಭಾಗವನ್ನು ಆವರಿಸುತ್ತದೆ.

ಬಾರ್ನಕಲ್‌ಗಳು ಹಡಗುಗಳ ವೇಗವನ್ನು ಕಡಿಮೆ ಮಾಡುತ್ತವೆ ಮತ್ತು ಅವನ್ನು ತೆಗೆಯುವುದು ತುಂಬ ಕಷ್ಟ

 ಈ ವಿಧಾನವನ್ನು ಬಳಸಿದರೆ ಹಡಗುಗಳನ್ನು ಬಾರ್ನಕಲ್‌ನಂಥ ಜೀವಿಗಳು ಹಾಳುಮಾಡದಂತೆ ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಪ್ರಯೋಗಗಳಿಂದ ತಿಳಿದುಬಂದಿದೆ. ಇದರಿಂದಾಗಿ ಹಡಗುಗಳನ್ನು ವ್ಯಾಪಾರಕ್ಕಾಗಿ ಉಪಯೋಗಿಸುವ ಕಂಪೆನಿಗಳಿಗೆ ತುಂಬ ಲಾಭ. ಯಾಕೆಂದರೆ ಈ ಹಿಂದೆ ಹಡಗುಗಳನ್ನು ನೀರಿನಿಂದ ಮೇಲಕ್ಕೆ ತಂದು ಶುಚಿಮಾಡಲು ಹೆಚ್ಚು ಹಣವನ್ನು ಸುರಿಯಬೇಕಿತ್ತು.

 ನೀವೇನು ನೆನಸುತ್ತೀರಿ? ಪೈಲಟ್‌ ತಿಮಿಂಗಿಲದ ತನ್ನನ್ನು ತಾನೇ ಶುಚಿ ಮಾಡಿಕೊಳ್ಳುವ ಸಾಮರ್ಥ್ಯವುಳ್ಳ ಚರ್ಮ ವಿಕಾಸವಾಗಿ ಬಂತಾ? ಅಥವಾ ಒಬ್ಬ ಸೃಷ್ಟಿಕರ್ತ ವಿನ್ಯಾಸಿಸಿದನಾ?