ಮಾಹಿತಿ ಇರುವಲ್ಲಿ ಹೋಗಲು

ಹಚ್ಚೆ ಹಾಕಿಸಿಕೊಳ್ಳುವುದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಹಚ್ಚೆ ಹಾಕಿಸಿಕೊಳ್ಳುವುದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬೈಬಲ್‌ ಕೊಡುವ ಉತ್ತರ

 ಯಾಜಕಕಾಂಡ 19:28ರಲ್ಲಿ “ನಿಮ್ಮ ದೇಹದ ಮೇಲೆ ಹಚ್ಚೆ ಹಾಕಿಸ್ಕೊಳ್ಳಬಾರದು” ಅಂತ ಇದೆ. ಬೈಬಲ್‌ನಲ್ಲಿ ಈ ತರ ಹೇಳಿರೋದು ಒಂದೇ ಒಂದು ಸಲ. ಇಸ್ರಾಯೇಲಿನ ಸುತ್ತ ಮುತ್ತ ಇದ್ದ ಬೇರೆ ಜನಾಂಗದವರು ಅವರ ದೇವರುಗಳ ಹೆಸರು ಅಥವಾ ಚಿಹ್ನೆಗಳನ್ನು ಹಚ್ಚೆ ಹಾಕಿಸ್ತಿದ್ದರು. ಆದರೆ ಇಸ್ರಾಯೇಲ್ಯರು ಈ ತರ ಹಚ್ಚೆ ಹಾಕಿಸಿಕೊಳ್ಳಬಾರದು ಅಂತ ಯೆಹೋವ ಈ ನಿಯಮವನ್ನ ಕೊಟ್ಚನು. (ಧರ್ಮೋಪದೇಶಕಾಂಡ 14:2) ಈಗ ನಾವು ಮೋಶೆಯ ನಿಯಮವನ್ನ ಪಾಲಿಸಬೇಕಾಗಿಲ್ಲ ನಿಜ. ಆದ್ರೆ ಈ ವಿಷಯದ ಬಗ್ಗೆ ದೇವರ ಯೋಚನಾ ರೀತಿ ಏನು ಅಂತ ತಿಳ್ಕೊಳ್ಳೋದು ತುಂಬ ಪ್ರಾಮುಖ್ಯ.

ಕ್ರೈಸ್ತರು ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳಬಹುದಾ?

 ಈ ಕೆಳಗಿರೋ ಬೈಬಲ್‌ ವಚನಗಳು ಅದರ ಬಗ್ಗೆ ಯೋಚನೆ ಮಾಡೋಕೆ ನಿಮಗೆ ಸಹಾಯ ಮಾಡುತ್ತೆ:

  •   “ಸ್ತ್ರೀಯರು... ಹಾಕೋ ಬಟ್ಟೆಯಿಂದ ಅವ್ರಿಗೆ ಬುದ್ಧಿ ಇದೆ, ತೋರಿಸ್ಕೊಳ್ಳೋರಲ್ಲ ಅಂತ ಗೊತ್ತಾಗಬೇಕು.” (1 ತಿಮೊತಿ 2:9) ಈ ತತ್ವ ಸ್ತ್ರೀಯರಿಗೆ ಮಾತ್ರವಲ್ಲ ಪುರುಷರಿಗೂ ಅನ್ವಯಿಸುತ್ತೆ. ನಾವು ಬೇರೆಯವರ ಭಾವನೆಗಳಿಗೆ ಬೆಲೆ ಕೊಡಬೇಕು. ಎಲ್ಲರ ಗಮನ ನಮ್ಮ ಮೇಲೆ ಬರೋ ತರ ಇರಬಾರದು.

  •   ಕೆಲವರು ‘ನಾವು ಒಂದು ನಿರ್ದಿಷ್ಟ ಗುಂಪಿಗೆ ಸೇರಿದವರು ಅಥವಾ ನಮ್ಮ ದೇಹಕ್ಕೆ ಏನು ಬೇಕಾದ್ರೂ ಮಾಡೋ ಹಕ್ಕು ನಮಗಿದೆ’ ಅಂತ ತೋರಿಸಿಕೊಳ್ಳೋಕೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ಬೈಬಲ್‌ ಕ್ರೈಸ್ತರಿಗೆ ಹೀಗೆ ಹೇಳುತ್ತೆ: “ನೀವು ನಿಮ್ಮ ದೇಹಗಳನ್ನ ಜೀವಂತವಾದ, ಪವಿತ್ರವಾದ ಮತ್ತು ದೇವರು ಮೆಚ್ಚೋ ಬಲಿಯಾಗಿ ಕೊಡಿ.” (ರೋಮನ್ನರಿಗೆ 12:1) ಅಲ್ಲದೆ ನೀವು ಯಾಕೆ ಹಚ್ಚೆ ಹಾಕಿಸಿಕೊಳ್ಳೋಕೆ ಇಷ್ಟಪಡ್ತೀರಾ ಅಂತ ತಿಳಿಯೋಕೆ “ನಿಮ್ಮ ಯೋಚನಾ ಸಾಮರ್ಥ್ಯವನ್ನ ಬಳಸಿ.” ‘ಎಲ್ಲರೂ ಹಚ್ಚೆ ಹಾಕಿಸಿಕೊಳ್ತಾರೆ, ಅದೇ ಈಗ ಫ್ಯಾಶನ್‌’ ಅಂತನೋ ಅಥವಾ ನಾವು ಒಂದು ನಿರ್ದಿಷ್ಟ ಗುಂಪಿಗೆ ಸೇರಿದ್ದೀವಿ ಅಂತ ತೋರಿಸೋಕೆ ಅಂತನೋ ಹಚ್ಚೆ ಹಾಕೋದಾದರೆ ಒಂದು ವಿಷಯ ನೆನಪಿಡಿ. ಅದೇನಂದ್ರೆ ಹಚ್ಚೆ ಪರ್ಮನೆಂಟ್‌ ಆಗಿರುತ್ತೆ. ಆಮೇಲೆ ಮನಸ್ಸು ಬದಲಾಯಿಸೋಕೆ ಆಗಲ್ಲ. ಈ ತರ ಯೋಚಿಸಿದರೆ ವಿವೇಕದಿಂದ ಒಳ್ಳೇ ತೀರ್ಮಾನ ಮಾಡೋಕೆ ಆಗುತ್ತೆ.—ಜ್ಞಾನೋಕ್ತಿ 4:7.

  •   “ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ, ಆದ್ರೆ ಆತುರಪಡುವವರು ಬಡತನಕ್ಕೆ ಬೀಳ್ತಾರೆ.” (ಜ್ಞಾನೋಕ್ತಿ 21:5) ಕೆಲವರು ಹಿಂದೆಮುಂದೆ ಯೋಚಿಸದೆ ದಿಢೀರ್‌ ಅಂತ ಹಚ್ಚೆ ಹಾಕಿಸಿಕೊಳ್ತಾರೆ. ಆದರೆ ಈ ತರ ದಿಢೀರ್‌ ಅಂತ ಹಾಕಿಸಿಕೊಂಡರೆ ಸಂಬಂಧಗಳು ಹಾಳಾಗುತ್ತೆ. ಜೊತೆಗೆ ಕೆಲಸ ಸಿಗುವುದೂ ಕಷ್ಟ ಆಗುತ್ತೆ. ಆಮೇಲೆ ಆ ಹಚ್ಚೆಯನ್ನು ತೆಗಿಸೋಕೆ ಜಾಸ್ತಿ ಖರ್ಚಾಗುತ್ತೆ ಮತ್ತು ತುಂಬ ನೋವು ಅನುಭವಿಸಬೇಕಾಗುತ್ತೆ. ಹಚ್ಚೆ ತೆಗಿಯೋದು ಈಗ ದೊಡ್ಡ ಬ್ಯುಸಿನೆಸ್‌ ಆಗಿಬಿಟ್ಟಿದೆ. ಆದ್ರೆ ಹಚ್ಚೆ ಹಾಕಿಸಿದ ಮೇಲೆ ‘ಅಯ್ಯೋ ಹಚ್ಚೆ ಹಾಕಿಸಿಕೊಳ್ಳಬಾರದಿತ್ತು’ ಅಂತ ಕೊರಗುವವರೇ ಜಾಸ್ತಿ ಅಂತ ಸಂಶೋಧನೆಗಳು ತಿಳಿಸುತ್ತೆ.