ಮಾಹಿತಿ ಇರುವಲ್ಲಿ ಹೋಗಲು

ಮನುಷ್ಯನಲ್ಲಿ ಅಮರ ಆತ್ಮ ಇದೆಯಾ?

ಮನುಷ್ಯನಲ್ಲಿ ಅಮರ ಆತ್ಮ ಇದೆಯಾ?

ಬೈಬಲ್‌ ಕೊಡುವ ಉತ್ತರ

 ನೆಫೆಶ್‌ ಎಂಬ ಹೀಬ್ರು ಪದವನ್ನು ಮತ್ತು ಸೈಕಿ ಎಂಬ ಗ್ರೀಕ್‌ ಪದವನ್ನು ಕೆಲವು ಕನ್ನಡ ಬೈಬಲಿನಲ್ಲಿ ಆತ್ಮ ಎಂದು ಭಾಷಾಂತರಿಸಲಾಗಿದೆ. ಆ ಹೀಬ್ರು ಪದದ ಅರ್ಥ “ಉಸಿರಾಡುವ ಒಂದು ಜೀವಿ.” ಆ ಗ್ರೀಕ್‌ ಪದದ ಅರ್ಥ “ಬದುಕಿರುವ ಮನುಷ್ಯ.” a ಹಾಗಾಗಿ ನೆಫೆಶ್‌ ಮತ್ತು ಸೈಕಿ ಒಬ್ಬ ವ್ಯಕ್ತಿ, ಪ್ರಾಣಿ ಅಥವಾ ಜೀವಿಗೆ ಸೂಚಿಸುತ್ತದೆಯೇ ವಿನಃ ಸತ್ತ ಮೇಲೆ ಶರೀರವನ್ನು ಬಿಟ್ಟು ಹೋಗುವ ಏನೋ ಒಂದನ್ನು ಸೂಚಿಸುವುದಿಲ್ಲ.

ಹಾಗಾಗಿ ಅನೇಕ ಬೈಬಲ್‌ ಭಾಷಾಂತರಗಳು ನೆಫೆಶ್‌ ಮತ್ತು ಸೈಕಿ ಪದಗಳನ್ನು ಸನ್ನಿವೇಶಕ್ಕೆ ತಕ್ಕ ಹಾಗೆ ಬೇರೆ ಬೇರೆ ರೀತಿಯಲ್ಲಿ ಭಾಷಾಂತರ ಮಾಡಿವೆ. ಉದಾಹರಣೆಗೆ “ಜೀವ,” “ವ್ಯಕ್ತಿ,” “ಜೀವಿ” ಅಥವಾ “ನಾನು.” ನೆಫೆಶ್‌ ಮತ್ತು ಸೈಕಿ ಪದಗಳು ಆತ್ಮವನ್ನು ಸೂಚಿಸುವುದಿಲ್ಲ ಅನ್ನುವುದಕ್ಕೆ ಕೆಳಗೆ ಕೊಟ್ಟಿರುವ ಕೆಲವು ಬೈಬಲ್‌ ವಚನಗಳನ್ನು ನೋಡಿ.

ದೇವರು ಆದಾಮನಿಗೆ ಆತ್ಮವನ್ನು ಕೊಟ್ಟು ಸೃಷ್ಟಿ ಮಾಡಲಿಲ್ಲ, ಆದಾಮನೇ ಉಸಿರಾಡುವ ಜೀವಿಯಾದ

  •   ಮೊದಲ ಮನುಷ್ಯನಾದ ಆದಾಮನನ್ನು ಯೆಹೋವ ದೇವರು ಸೃಷ್ಟಿ ಮಾಡಿದಾಗ “ಆ ಮನುಷ್ಯನು ಉಸಿರಾಡೋ ಜೀವಿಯಾದ” ಎಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 2:7, ಪಾದಟಿಪ್ಪಣಿ) ಹೀಬ್ರು ಭಾಷೆಯಲ್ಲಿ ಆ ವಚನದ ಅರ್ಥ “ಆ ಮನುಷ್ಯನು ಉಸಿರಾಡೋ ನೆಫೆಶ್‌ ಆದ.” ಹಾಗಾಗಿ ದೇವರು ಆದಾಮನಿಗೆ ಆತ್ಮವನ್ನು ಕೊಟ್ಟು ಸೃಷ್ಟಿ ಮಾಡಲಿಲ್ಲ, ಆದಾಮನೇ ಉಸಿರಾಡುವ ಜೀವಿಯಾದ.

  •   ಒಬ್ಬ ವ್ಯಕ್ತಿ (ನೆಫೆಶ್‌ ಮತ್ತು ಸೈಕಿ) ಕೆಲಸ ಮಾಡುತ್ತಾನೆ, ತಿನ್ನಲು ಆಸೆಪಡುತ್ತಾನೆ, ತಿನ್ನುತ್ತಾನೆ, ನಿಯಮಗಳನ್ನು ಪಾಲಿಸುತ್ತಾನೆ ಎಂದು ಬೈಬಲ್‌ ಹೇಳುತ್ತದೆ. (ಯಾಜಕಕಾಂಡ 7:20; 23:30; ಧರ್ಮೋಪದೇಶಕಾಂಡ 12:20; ರೋಮನ್ನರಿಗೆ 13:1) ಈ ಎಲ್ಲ ಕೆಲಸಗಳನ್ನು ಬದುಕಿರುವ ಮನುಷ್ಯ ಮಾಡುತ್ತಾನೆ, ಆತ್ಮ ಮಾಡುವುದಿಲ್ಲ.

ನೆಫೆಶ್‌ ಮತ್ತು ಸೈಕಿ ಅರ್ಥ ಆತ್ಮ ಅಮರ ಅಂತನಾ?

 ಇಲ್ಲ. ಏಕೆಂದರೆ ನೆಫೆಶ್‌ ಮತ್ತು ಸೈಕಿ ಸಾಯುತ್ತವೆ ಎಂದು ಅನೇಕ ವಚನಗಳು ತೋರಿಸುತ್ತವೆ. ಹಾಗಾಗಿ ಈ ಎರಡು ಪದಗಳ ಅರ್ಥ ಆತ್ಮ ಅಲ್ಲವೇ ಅಲ್ಲ. ಆದರೆ ನೆಫೆಶ್‌ ಮತ್ತು ಸೈಕಿಗೆ ಜೀವ ಅಥವಾ ವ್ಯಕ್ತಿ ಎಂಬ ಅರ್ಥವೂ ಇದೆ ಮತ್ತು ಆ ವ್ಯಕ್ತಿ ಸಾಯುತ್ತಾನೆ ಎಂದು ಬೈಬಲ್‌ ತೋರಿಸುತ್ತದೆ. ಕೆಲವು ಉದಾಹರಣೆಗಳನ್ನು ನೋಡಿ:

  •   “ಪಾಪ ಮಾಡೋ ವ್ಯಕ್ತಿನೇ [ನೆಫೆಶ್‌] ಸಾಯ್ತಾನೆ.”—ಯೆಹೆಜ್ಕೇಲ 18:4, 20.

  •   ಹಿಂದಿನ ಕಾಲದ ಇಸ್ರಾಯೇಲಿನಲ್ಲಿ ದೊಡ್ಡ ದೊಡ್ಡ ಪಾಪಗಳನ್ನು ಮಾಡಿದವರಿಗೆ ಕೊಡುವ ಶಿಕ್ಷೆ ಬಗ್ಗೆ ತಿಳಿಸುವಾಗ “ಅವನನ್ನ [ನೆಫೆಶ್‌] ಸಾಯಿಸಬೇಕು” ಅಂತಿದೆ. (ವಿಮೋಚನಕಾಂಡ 12:15, 19; 31:14; ಯಾಜಕಕಾಂಡ 7:20, 21, 27; 19:8)

  •   ಕೆಲವು ಬೈಬಲ್‌ ವಚನಗಳಲ್ಲಿ ಶವ ಅನ್ನೋ ಪದಕ್ಕೆ ಹೀಬ್ರು ಭಾಷೆಯಲ್ಲಿ “ಸತ್ತ ನೆಫೆಶ್‌” ಅಂತಿದೆ. (ಯಾಜಕಕಾಂಡ 21:11; ಅರಣ್ಯಕಾಂಡ 6:6) ಇದೇ ವಚನಗಳಲ್ಲಿ ಕೆಲವು ಬೈಬಲ್‌ ಭಾಷಾಂತರಗಳು “ಮೃತ ಶರೀರ” ‘ಸತ್ತವರು’ ಎಂಬ ಪದಗಳನ್ನು ಉಪಯೋಗಿಸಿವೆ. ಹೀಬ್ರುವಿನಲ್ಲಿ ನೆಫೆಶ್‌ ಎಂದೇ ಇದೆ. ಇದರಿಂದ ನೆಫೆಶ್‌ ಆತ್ಮ ಅಲ್ಲ, ಅದು ಸಾಯುತ್ತದೆ ಎಂದು ಗೊತ್ತಾಗುತ್ತದೆ.

ನೆಫೆಶ್‌ ಮತ್ತು ಸೈಕಿ ಅಂದರೆ “ಜೀವ” “ಪ್ರಾಣ”

 ಬೈಬಲಿನಲ್ಲಿ ನೆಫೆಶ್‌ ಮತ್ತು ಸೈಕಿ ಪದಗಳನ್ನು “ಜೀವ” ಅಥವಾ “ಪ್ರಾಣವನ್ನು” ಸೂಚಿಸಲಿಕ್ಕೂ ಬಳಸಲಾಗಿದೆ. ಉದಾಹರಣೆಗೆ ಯೋಬ 33:22 ರಲ್ಲಿರುವ “ಪ್ರಾಣ” ಪದಕ್ಕೆ ಹೀಬ್ರುವಿನಲ್ಲಿ ನೆಫೆಶ್‌ ಅಂತಿದೆ. ನೆಫೆಶ್‌ ಅಂದರೆ ಪ್ರಾಣ, ಜೀವಕ್ಕೆ ಅಪಾಯ ಬರುತ್ತದೆ ಅಥವಾ ಅದು ಹೋಗುತ್ತದೆ ಎಂದು ಸಹ ಬೈಬಲ್‌ ತೋರಿಸುತ್ತದೆ.—ವಿಮೋಚನಕಾಂಡ 4:19; ನ್ಯಾಯಸ್ಥಾಪಕರು 9:17; ಫಿಲಿಪ್ಪಿ 2:30.

 ನೆಫೆಶ್‌ ಮತ್ತು ಸೈಕಿ ಪದಗಳ ಅರ್ಥವನ್ನು ಮನಸ್ಸಲ್ಲಿಟ್ಟರೆ ಕೆಲವು ವಚನಗಳಲ್ಲಿ ‘ಜೀವ ಹೋಗುತ್ತಿದೆ’ ಅಂತ ಯಾಕಿದೆಯೆಂದು ಅರ್ಥಮಾಡಿಕೊಳ್ಳಲು ಆಗುತ್ತದೆ. (ಆದಿಕಾಂಡ 35:18) ‘ಜೀವ ಹೋಗುತ್ತಿದೆ’ ಅನ್ನುವುದು ಒಂದು ಅಲಂಕಾರಿಕ ಭಾಷೆ. ಅದು ಒಬ್ಬ ವ್ಯಕ್ತಿಯ ಜೀವನ ಕೊನೆ ಆಗುತ್ತಾ ಇದೆ ಎಂದು ಸೂಚಿಸುತ್ತದೆ. ಕೆಲವು ಭಾಷಾಂತರಗಳು ಆದಿಕಾಂಡ 35:18 ರಲ್ಲಿ “ಅವಳು ಪ್ರಾಣಬಿಡುವಾಗ” “ಸಾಯುವುದಕ್ಕೆ ಮೊದಲು” ಎಂದು ಅನುವಾದ ಮಾಡಿವೆ.—ಪರಿಶುದ್ಧ ಬೈಬಲ್‌; ಪವಿತ್ರ ಬೈಬಲ್‌.

ಆತ್ಮ ಅಮರ ಎಂಬ ನಂಬಿಕೆ ಹೇಗೆ ಬಂತು?

 ಆತ್ಮ ಅಮರ ಅನ್ನುವ ಬೋಧನೆ ಬೈಬಲಿನಲ್ಲಿ ಇಲ್ಲ. ಇದು ಪುರಾತನ ಗ್ರೀಕ್‌ ತತ್ವಜ್ಞಾನದಲ್ಲಿರುವ ಬೋಧನೆ. ಈ ಬೋಧನೆಯನ್ನೇ ಕ್ರೈಸ್ತ ಪಂಗಡಗಳು ನಂಬಲು ಶುರುಮಾಡಿದವು. ಎನ್‌ಸೈಕ್ಲೋಪೀಡಿಯಾ ಬ್ರಿಟ್ಯಾನಿಕ ಹೀಗೆ ಹೇಳುತ್ತದೆ: “ಬೈಬಲಿನಲ್ಲಿ ಹೇಳುವಂಥ ನೆಫೆಶ್‌ (ಹೀಬ್ರು) ಮತ್ತು ಸೈಕಿ (ಗ್ರೀಕ್‌) ಉಸಿರಿಗೆ ಸೂಚಿಸುತ್ತದೆ. ದೇಹ ಮತ್ತು ಉಸಿರು ಇವೆರಡೂ ಬೇರೆ ಬೇರೆ ಎಂಬ ಅರ್ಥ ಕೊಡುವುದಿಲ್ಲ. ಆದರೆ ದೇಹ ಬೇರೆ ಆತ್ಮ ಬೇರೆ ಅಂತ ಏನು ಕ್ರೈಸ್ತರು ನಂಬುತ್ತಾರೋ ಅದು ಪ್ರಾಚೀನ ಗ್ರೀಕರ ಬೋಧನೆಯಾಗಿದೆ.”

 ಆತ್ಮ ಅಮರ ಇಂಥ ತತ್ವಜ್ಞಾನದ ಬೋಧನೆಗಳನ್ನು ದೇವರ ಬೋಧನೆಗಳೊಂದಿಗೆ ಸೇರಿಸುವುದನ್ನು ಆತನು ಒಪ್ಪುವುದೇ ಇಲ್ಲ. ಬೈಬಲ್‌ ಈ ಎಚ್ಚರಿಕೆ ಕೊಡುತ್ತದೆ: “ಈ ಲೋಕದ ಜ್ಞಾನದಿಂದ, ಅರ್ಥವಾಗದ ಮೋಸದ ಮಾತುಗಳಿಂದ ಯಾರೂ ನಿಮ್ಮನ್ನ ಕೈದಿಯಾಗಿ ಹಿಡ್ಕೊಂಡು ಹೋಗೋಕೆ ಬಿಡಬೇಡಿ, ಹುಷಾರು! ಯಾಕಂದ್ರೆ ಅವು ಮಾನವ ಸಂಪ್ರದಾಯಗಳಿಗೆ ... ತಕ್ಕ ಹಾಗಿವೆ.”—ಕೊಲೊಸ್ಸೆ 2:8.

a ದ ನ್ಯೂ ಬ್ರೌನ್‌, ಡ್ರೈವರ್‌ ಅಂಡ್‌ ಬ್ರಿಗ್ಸ್‌ ಹೀಬ್ರು ಅಂಡ್‌ ಇಂಗ್ಲಿಷ್‌ ಲೆಕ್ಸಿಕನ್‌ ಆಫ್‌ ದ ಓಲ್ಡ್‌ ಟೆಸ್ಟಮೆಂಟ್‌, ಪುಟ 659 ಮತ್ತು ದ ಲೆಕ್ಸಿಕನ್‌ ಇನ್‌ ವೆಟರಿಸ್‌ ಟೆಸ್ಟಮೆಂಟಿ ಲಿಬ್ರಾಸ್‌, ಪುಟ 627 ನೋಡಿ.