ಮಾಹಿತಿ ಇರುವಲ್ಲಿ ಹೋಗಲು

ಸೇಡು ತೀರಿಸೋದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಸೇಡು ತೀರಿಸೋದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬೈಬಲ್‌ ಕೊಡೋ ಉತ್ತರ

 ಒಬ್ಬ ವ್ಯಕ್ತಿ ನಂದೇನೂ ತಪ್ಪಿಲ್ಲ ಅಂದ್ಕೊಂಡು ಇನ್ನೊಬ್ಬನ ಮೇಲೆ ಸೇಡು ತೀರಿಸೋಕೆ ಹೋದ್ರೆ ಅವನು ಬೈಬಲ್‌ ಸಲಹೆಗೆ ವಿರುದ್ಧವಾಗಿ ನಡ್ಕೊಳ್ತಾನೆ. ಯಾಕಂದ್ರೆ “ಅವನು ನನಗೆ ಮಾಡಿದ ಹಾಗೇ ನಾನು ಅವನಿಗೆ ಮಾಡ್ತೀನಿ, ಅವನು ಮಾಡಿದ್ದಕ್ಕೆ ಸೇಡು ತೀರಿಸ್ತೀನಿ ಅಂತ ಹೇಳಬೇಡ.” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 24:29) ಸೇಡು ತೀರಿಸೋದನ್ನ ನಿಲ್ಲಿಸೋಕೆ ತುಂಬ ಜನರಿಗೆ ಬೈಬಲ್‌ ಸಹಾಯ ಮಾಡಿದೆ.

ಈ ಲೇಖನದಲ್ಲಿ

 ಸೇಡು ತೀರಿಸೋದು ತಪ್ಪಾ?

 ಯಾರಾದ್ರೂ ನಮಗೆ ನೋವು ಮಾಡಿದ್ರೆ ಅಥವಾ ಹಾನಿ ಮಾಡಿದ್ರೆ ಅವರ ಮೇಲೆ ಕೋಪ ಬರೋದು, ಅವರಿಗೆ ಸರಿಯಾದ ಶಿಕ್ಷೆಯಾಗಬೇಕು ಅಂತ ಅಂದ್ಕೊಳ್ಳೋದು ಸಹಜ. ಆದ್ರೆ ಅವರ ಮೇಲೆ ಸೇಡು ತೀರಿಸಿಕೊಂಡ್ರೆ ಅದು ಬೈಬಲಿಗೆ ವಿರುದ್ಧವಾಗಿರುತ್ತೆ. ಅದು ಹೇಗೆ?

 ನಾವು ಸೇಡು ತೀರಿಸಿದ್ರೆ ದೇವರಿಗೆ ಇಷ್ಟ ಆಗಲ್ಲ. ಯಾಕಂದ್ರೆ, “ಸೇಡು ತೀರಿಸೋದು ನನ್ನ ಕೆಲಸ, ನಾನೇ ಸರಿಯಾದ ಪ್ರತಿಫಲ ಕೊಡ್ತೀನಿ” ಅಂತ ಯೆಹೋವ a ದೇವರು ಬೈಬಲಿನಲ್ಲಿ ಹೇಳಿದ್ದಾರೆ. (ರೋಮನ್ನರಿಗೆ 12:19) ಯಾರಿಂದಾದ್ರೂ ನಿಮಗೆ ನೋವಾಗಿದ್ರೆ, ಹಾನಿಯಾಗಿದ್ರೆ ಸೇಡು ತೀರಿಸ್ಕೊಳ್ಳೋ ಬದಲು ಆ ಸಮಸ್ಯೆಯನ್ನ ಶಾಂತಿಯಿಂದ ಸರಿಪಡಿಸಿ ಅಂತ ಬೈಬಲ್‌ ಹೇಳುತ್ತೆ. (ರೋಮನ್ನರಿಗೆ 12:18) ಆದ್ರೆ ಆ ಸಮಸ್ಯೆಯನ್ನ ಶಾಂತಿಯಿಂದ ಬಗೆಹರಿಸೋಕೆ ಆಗ್ತಿಲ್ಲ ಅಂದ್ರೆ ಏನು ಮಾಡೋದು? ಅಂಥ ಸಮಯದಲ್ಲಿ ಯೆಹೋವ ಎಲ್ಲಾನೂ ಸರಿಮಾಡ್ತಾನೆ ಅಂತ ನಂಬಬೇಕು ಅಂತ ಬೈಬಲ್‌ ಹೇಳುತ್ತೆ.—ಕೀರ್ತನೆ 42:10, 11.

 ಸೇಡು ತೀರಿಸಿದ್ರೆ ದೇವರು ಏನು ಮಾಡ್ತಾನೆ?

 ಸದ್ಯಕ್ಕೆ ಈಗಿರೋ ಅಧಿಕಾರಿಗಳು ಶಿಕ್ಷೆ ಕೊಡೋಕೆ ದೇವರು ಬಿಟ್ಟು ಕೊಟ್ಟಿದ್ದಾನೆ. (ರೋಮನ್ನರಿಗೆ 13:1-4) ಆದ್ರೆ ಇನ್ನು ಸ್ವಲ್ಪ ಸಮಯದಲ್ಲೇ ಅನ್ಯಾಯ ಆದವರಿಗೆಲ್ಲಾ ದೇವರು ನ್ಯಾಯ ಕೊಡ್ತಾನೆ. ಅಷ್ಟೇ ಅಲ್ಲ ಕಷ್ಟ ಸಮಸ್ಯೆಗಳನ್ನ ಪೂರ್ತಿ ತೆಗೆದುಹಾಕ್ತಾನೆ.—ಯೆಶಾಯ 11:4.

 ಸೇಡು ತೀರಿಸೋ ಸ್ವಭಾವದಿಂದ ನಾನು ಹೇಗೆ ಹೊರ ಬರಲಿ?

  •   ದುಡುಕಬೇಡಿ. (ಜ್ಞಾನೋಕ್ತಿ 17:27) “ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬಂದೀತೇ?” ಅನ್ನೋ ಗಾದೆಯನ್ನ ನೀವು ಕೇಳಿರುತ್ತೀರ. ಎಷ್ಟೋ ಜನ ಕೋಪದಲ್ಲಿ ದುಡುಕಿ ತಪ್ಪು ಮಾಡಿ ಆಮೇಲೆ ವಿಷಾದಪಡ್ತಾರೆ. ಆದ್ರೆ ಯಾರು ದುಡುಕದೆ ಚೆನ್ನಾಗಿ ಯೋಚನೆ ಮಾಡ್ತಾರೋ ಅವರು ಒಳ್ಳೇ ನಿರ್ಧಾರಗಳನ್ನ ಮಾಡ್ತಾರೆ.—ಜ್ಞಾನೋಕ್ತಿ 29:11.

  •   ನಿಜ ಏನಂತ ತಿಳ್ಕೊಳ್ಳಿ. (ಜ್ಞಾನೋಕ್ತಿ 18:13) ಯಾರಾದ್ರೂ ನಿಮಗೆ ಅನ್ಯಾಯ ಮಾಡಿದ್ರೆ ಹೀಗೆ ಕೇಳಿಕೊಳ್ಳಿ: ಅವನು ಯಾಕೆ ನನ್ನತ್ರ ಹೀಗೆ ನಡ್ಕೊಂಡ ಅನ್ನೋದಕ್ಕೆ ನನಗೆ ಗೊತ್ತಿಲ್ಲದಿರೋ ಬೇರೆ ಕಾರಣಗಳಿದ್ಯಾ? ಅವನು ಯಾವುದಾದ್ರೂ ಒತ್ತಡದಲ್ಲಿದ್ನಾ? ಅಥವಾ ಅವನು ಗೊತ್ತಿಲ್ಲದೇ ಈ ತರ ಮಾಡಿದ್ನಾ? ಕೆಲವೊಮ್ಮೆ ಅವರು ಬೇಕುಬೇಕಂತ ಹಾಗೆ ಮಾಡಿದ್ದಾರೆ ಅಂತ ನಮಗನಿಸಿದರೂ ಅವರದನ್ನ ಗೊತ್ತಿಲ್ಲದೇ ಮಾಡಿರುತ್ತಾರೆ.

 ಸೇಡು ತೀರಿಸೋದ್ರ ಬಗ್ಗೆ ಇರೋ ತಪ್ಪಭಿಪ್ರಾಯಗಳು

 ತಪ್ಪಭಿಪ್ರಾಯ: “ಕಣ್ಣಿಗೆ ಕಣ್ಣು” ಅಂತ ಹೇಳೋ ಮೂಲಕ ಬೈಬಲ್‌ ಸೇಡು ತೀರಿಸ್ಕೊಳ್ಳೋದನ್ನ ಒಪ್ಪುತ್ತೆ.—ಯಾಜಕಕಾಂಡ 24:20.

 ಸತ್ಯ: “ಕಣ್ಣಿಗೆ ಕಣ್ಣು” ಅನ್ನೋ ನಿಯಮ ಇಸ್ರಾಯೇಲ್ಯರು ವೈಯಕ್ತಿಕವಾಗಿ ಸೇಡು ತೀರಿಸೋಕೆ ಕೊಟ್ಟಿದ್ದಲ್ಲ. ಬದಲಿಗೆ ನ್ಯಾಯಧೀಶರು ಸರಿಯಾದ ಶಿಕ್ಷೆ b ಕೊಡಲಿಕ್ಕಾಗಿ ಈ ನಿಯಮ ಕೊಟ್ಟಿದ್ದು.—ಧರ್ಮೋಪದೇಶಕಾಂಡ 19:15-21.

 ತಪ್ಪಭಿಪ್ರಾಯ: ಬೈಬಲ್‌ ಸೇಡು ತೀರಿಸಬಾರದು ಅಂತ ಹೇಳೋದ್ರಿಂದ ಯಾರಾದ್ರೂ ನಮಗೆ ಹಾನಿ ಮಾಡೋಕೆ ಬಂದ್ರೂ ನಾವು ಕೈ ಕಟ್ಟಿಕೊಂಡು ಸುಮ್ಮನೆ ಕೂತಿರಬೇಕು.

 ಸತ್ಯ: ಯಾರಾದ್ರೂ ಹಾನಿ ಮಾಡೋಕೆ ಬಂದಾಗ ಅದನ್ನ ತಡಿಯೋ ಹಕ್ಕು ಪ್ರತಿಯೊಬ್ಬನಿಗೂ ಇದೆ. ಅಷ್ಟೇ ಅಲ್ಲ ತನ್ನ ರಕ್ಷಣೆಗಾಗಿ ಅಧಿಕಾರಿಗಳ ಸಹಾಯವನ್ನೂ ಪಡೆಯಬಹುದು. ಆದ್ರೆ ಸಮಸ್ಯೆಯನ್ನ ದೊಡ್ಡದು ಮಾಡ್ತಾ ಜಗಳ ಮಾಡಬಾರದು ಅಂತ ಬೈಬಲ್‌ ಹೇಳುತ್ತೆ.—ಜ್ಞಾನೋಕ್ತಿ 17:14.

a ಬೈಬಲ್‌ನಲ್ಲಿ ದೇವರ ಹೆಸರನ್ನ ಯೆಹೋವ ಅಂತ ಹೇಳಲಾಗಿದೆ.

b ಈ ನಿಯಮದ ಬಗ್ಗೆ ಹೆಚ್ಚನ್ನ ತಿಳ್ಕೊಳ್ಳೋಕೆ “‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಅರ್ಥವೇನು?” ಅನ್ನೋ ಲೇಖನವನ್ನ ನೋಡಿ.