ಮಾಹಿತಿ ಇರುವಲ್ಲಿ ಹೋಗಲು

ಪವಿತ್ರವಾಗಿರೋದು ಅಂದ್ರೆ ಏನು?

ಪವಿತ್ರವಾಗಿರೋದು ಅಂದ್ರೆ ಏನು?

ಬೈಬಲ್‌ ಕೊಡೋ ಉತ್ತರ

 ಪವಿತ್ರವಾಗಿರೋದು ಗಲೀಜು ಆಗದೆ, ಹೊಲಸಾಗದೆ ಇರೋದನ್ನ ಸೂಚಿಸುತ್ತೆ. ಪವಿತ್ರ ಅನ್ನೋದಕ್ಕಿರುವ ಹೀಬ್ರು ಪದದ ಅರ್ಥ “ಬೇರೆಯಾಗಿ ಇಟ್ಟಿರೋದು.” ಹಾಗಾಗಿ ಯಾವುದಾದರೂ ಒಂದನ್ನ ಪವಿತ್ರ ಅಂತ ಹೇಳೋವಾಗ ಅದು ಸಾಮಾನ್ಯವಾಗಿ ಬಳಸುವಂಥದ್ದಲ್ಲ. ಅದು ಸ್ವಚ್ಛವಾಗಿ, ಶುದ್ಧವಾಗಿ ಇದೆ ಎಂದರ್ಥ.

 ಅತಿ ಶ್ರೇಷ್ಠ ಮಟ್ಟದಲ್ಲಿ ಪವಿತ್ರವಾಗಿರೋದು ದೇವರು ಒಬ್ಬನೇ. ಬೈಬಲ್‌ ಹೀಗನ್ನುತ್ತೆ: ‘ಯೆಹೋವನಷ್ಟು a ಪರಿಶುದ್ಧನು ಇಲ್ಲವೇ ಇಲ್ಲ.’ (1 ಸಮುವೇಲ 2:2) ಹಾಗಾಗಿ ಯಾವುದು ಪವಿತ್ರ, ಯಾವುದು ಪವಿತ್ರ ಅಲ್ಲ ಅಂತ ತೀರ್ಮಾನ ಮಾಡೋದು ದೇವರೊಬ್ಬನೇ.

 ನೇರವಾಗಿ ದೇವರಿಗೆ ಸಂಬಂಧಪಟ್ಟದ್ದು ಏನೇ ಆಗಿದ್ರೂ ಅದನ್ನ “ಪವಿತ್ರ“ ಅಂತ ಹೇಳಬಹುದು. ವಿಶೇಷವಾಗಿ ಆರಾಧನೆಗೆ ಅಂತಾನೇ ಇಟ್ಟಿರೋ ವಸ್ತುಗಳು ಪವಿತ್ರವಾಗಿವೆ. ಉದಾಹರಣೆಗೆ ಬೈಬಲ್‌ ಏನೇನನ್ನು ಪವಿತ್ರ ಅಂತ ಹೇಳುತ್ತೆ ನೋಡಿ:

  •   ಪವಿತ್ರ ಸ್ಥಳಗಳು: ದೇವರು ಮೋಶೆಗೆ ಉರಿಯುವ ಪೊದೆ ಹತ್ತಿರ ಹೀಗಂದನು: “ನೀನು ನಿಂತಿರುವ ಸ್ಥಳವು ಪರಿಶುದ್ಧಭೂಮಿ.”—ವಿಮೋಚನಕಾಂಡ 3:2-5.

  •   ಪವಿತ್ರ ಘಟನೆಗಳು: ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರು ತಪ್ಪದೇ ಹಬ್ಬಗಳಲ್ಲಿ ಯೆಹೋವನನ್ನ ಆರಾಧಿಸ್ತಿದ್ರು. ಈ ಹಬ್ಬಗಳನ್ನ ‘ಪವಿತ್ರ ಅಧಿವೇಶನಗಳು‘ ಅಂತ ಕರಿತಿದ್ರು.—ಯಾಜಕಕಾಂಡ 23:37 NW.

  •   ಪವಿತ್ರ ವಸ್ತುಗಳು: ಹಿಂದೆ ಯೆರೂಸಲೇಮಲ್ಲಿದ್ದ ಆಲಯದಲ್ಲಿ ದೇವರ ಆರಾಧನೆಗಾಗಿ ಬಳಸ್ತಿದ್ದ ಎಲ್ಲ ವಸ್ತುವನ್ನ “ಪರಿಶುದ್ಧ ವಸ್ತು” ಅಂತ ಕರಿತಿದ್ರು. (1 ಅರಸು 8:4) ಅಂಥ ವಸ್ತುಗಳನ್ನ ಆರಾಧಿಸಬಾರದಿತ್ತು. b ಆದರೆ ಅವುಗಳನ್ನ ಬಳಸುವಾಗ ತುಂಬ ಗೌರವದಿಂದ ಕಾಣಬೇಕಿತ್ತು.

ಪಾಪಿಗಳು ಪವಿತ್ರರಾಗಿ ಇರೋಕೆ ಆಗುತ್ತಾ?

 ಆಗುತ್ತೆ. ದೇವರು ಕ್ರೈಸ್ತರಿಗೆ ಹೀಗೆ ಆಜ್ಞೆ ಕೊಟ್ಟಿದ್ದಾನೆ: “ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು” (1 ಪೇತ್ರ 1:16) ನಾವು ಪಾಪಿಗಳಾಗಿರೋದ್ರಿಂದ ದೇವರು ಹೇಳಿರೋವಷ್ಟು ಮಟ್ಟಿಗೆ ಪವಿತ್ರರಾಗಿ ಇರಲಿಕ್ಕೆ ಆಗಲ್ಲ ನಿಜ. ಆದರೂ ದೇವರ ನೀತಿಯ ನಿಯಮಗಳಿಗೆ ಯಾರು ವಿಧೇಯರಾಗುತ್ತಾರೋ ಅವರನ್ನ ದೇವರು ಪವಿತ್ರರಾಗಿ ಕಾಣುತ್ತಾನೆ ಮತ್ತು ಮೆಚ್ಚುತ್ತಾನೆ. (ರೋಮನ್ನರಿಗೆ 12:1) ಪವಿತ್ರವಾಗಿ ಇರೋಕೆ ಪ್ರಯತ್ನಿಸೋ ವ್ಯಕ್ತಿ ತನ್ನ ನಡೆನುಡಿಯಲ್ಲಿ ಅದನ್ನ ತೋರಿಸ್ತಾನೆ. ಉದಾಹರಣೆಗೆ, ’ಪವಿತ್ರರಾಗಿರಿ, ಹಾದರದಿಂದ ದೂರವಿರಿ,’ ’ನಿಮ್ಮ ಎಲ್ಲ ನಡವಳಿಕೆಯಲ್ಲಿ ಪವಿತ್ರರಾಗಿರಿ’ ಎಂಬ ಬೈಬಲ್‌ ಸಲಹೆಯನ್ನು ಅವನು ಪಾಲಿಸ್ತಾನೆ.—1 ಥೆಸಲೊನೀಕ 4:3; 1 ಪೇತ್ರ 1:15.

ಪವಿತ್ರವಾಗಿ ಇರೋರು ಮತ್ತೆ ಅಪವಿತ್ರರಾಗ್ತಾರಾ?

 ಹೌದು. ಒಬ್ಬ ವ್ಯಕ್ತಿ ದೇವರ ನಿಯಮಗಳನ್ನು ಪಾಲಿಸೋದನ್ನ ಬಿಟ್ಟುಬಿಟ್ರೆ ದೇವರು ಅವನನ್ನ ಪವಿತ್ರನೆಂದು ಕಾಣುವುದಿಲ್ಲ. ಉದಾಹರಣೆಗೆ, ಇಬ್ರಿಯರಿಗೆ ಬರೆದ ಪತ್ರವನ್ನ ’ಪವಿತ್ರ ಸಹೋದರರಿಗೆ’ ಬರೆಯಲಾಯಿತು. ಆದರೆ ಅವರು ಜಾಗ್ರತೆ ವಹಿಸದಿದ್ರೆ ’ಜೀವವುಳ್ಳ ದೇವರಿಂದ ದೂರಹೋಗುವಂತೆ ಮಾಡುವ ಅಪನಂಬಿಕೆಯುಳ್ಳ ಕೆಟ್ಟ ಹೃದಯ ಬೆಳಿಸಿಕೊಳ್ಳಬಹುದು’ ಅಂತ ಎಚ್ಚರಿಕೆ ಕೊಡಲಾಯಿತು.—ಇಬ್ರಿಯ 3:1, 12.

ಪವಿತ್ರವಾಗಿರೋದ್ರ ಬಗ್ಗೆ ತಪ್ಪು ಅಭಿಪ್ರಾಯಗಳು

 ತಪ್ಪು ಅಭಿಪ್ರಾಯ: ನಮ್ಮ ಆಸೆ ಆಕಾಂಕ್ಷೆಗಳನ್ನ ಬಿಟ್ಟು ಬದುಕಿದ್ರೆ ಪವಿತ್ರವಾಗಿ ಇರೋಕೆ ಸಾಧ್ಯ.

 ನಿಜ: ’ದೇಹದಂಡನೆ, ಶಾರೀರಿಕ ಇಚ್ಛೆಗಳನ್ನು ನಿಗ್ರಹಿಸುವುದು ಇದು ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ’ ಅಂತ ಬೈಬಲ್‌ ಹೇಳುತ್ತೆ. ದೇವರ ಮುಂದೆ ಇದಕ್ಕೆಲ್ಲ ಬೆಲೆ ಇಲ್ಲ. (ಕೊಲೊಸ್ಸೆ 2:23) ನಾವು ಒಳ್ಳೇ ವಿಷ್ಯಗಳನ್ನೆಲ್ಲ ಆನಂದಿಸಬೇಕು ಅಂತ ದೇವರು ಇಷ್ಟಪಡ್ತಾನೆ. “ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ.”—ಪ್ರಸಂಗಿ 3:13.

 ತಪ್ಪು ಅಭಿಪ್ರಾಯ: ಮದುವೆಯಾಗದೆ ಇದ್ರೆ ಪವಿತ್ರರಾಗಿ ಇರೋಕೆ ಸಾಧ್ಯ.

 ನಿಜ: ಮದುವೆ ಆಗೋದು, ಆಗದೆ ಇರೋದು ಒಬ್ಬ ಕ್ರೈಸ್ತನಿಗೆ ಬಿಟ್ಟಿದ್ದು. ಆದರೆ ಬ್ರಹ್ಮಚರ್ಯರಾಗಿ ಇರೋದ್ರಿಂದ ದೇವರು ನಮ್ಮನ್ನ ಪವಿತ್ರರಾಗಿ ಕಾಣುವುದಿಲ್ಲ. ಮದುವೆ ಆಗದೆ ಇರೋರು ಯಾವುದೇ ಅಪಕರ್ಷಣೆ ಇಲ್ಲದೆ ದೇವರನ್ನ ಆರಾಧಿಸಬಹುದು ನಿಜ. (1 ಕೊರಿಂಥ 7:32-34) ಆದರೆ ಮದುವೆ ಆದವರೂ ಪವಿತ್ರರಾಗಿ ಇರೋಕೆ ಆಗುತ್ತೆ ಅಂತ ಬೈಬಲ್‌ ತಿಳಿಸ್ತದೆ. ಯೇಸುವಿನ ಅಪೊಸ್ತಲರಲ್ಲಿ ಒಬ್ಬನಿಗಾದ್ರೂ ಮದುವೆ ಆಗಿತ್ತು. ಅದು ಪೇತ್ರ.—ಮತ್ತಾಯ 8:14; 1 ಕೊರಿಂಥ 9:5.

a ಯೆಹೋವ ಅನ್ನೋದು ದೇವರ ಹೆಸರು. ಬೈಬಲಿನ ನೂರಾರು ವಚನಗಳಲ್ಲಿ ಈ ಹೆಸರು ಬರುವಾಗೆಲ್ಲ “ಪವಿತ್ರ” “ಪವಿತ್ರವಾಗಿರೋದು” ಅಂತಾನೂ ತಿಳಿಸಲಾಗಿದೆ.

b ಪವಿತ್ರ ವಸ್ತುಗಳನ್ನ ಆರಾಧಿಸಬಾರದು ಅಂತ ಬೈಬಲ್‌ ಹೇಳುತ್ತೆ.—1 ಕೊರಿಂಥ 10:14.