ಮಾಹಿತಿ ಇರುವಲ್ಲಿ ಹೋಗಲು

ಅವರ ನಂಬಿಕೆಯನ್ನು ಅನುಕರಿಸಿ | ಮಿರ್ಯಾಮ್‌

“ಹಾಡುತ್ತಾ ಯೆಹೋವನನ್ನ ಕೊಂಡಾಡಿದಳು!”

“ಹಾಡುತ್ತಾ ಯೆಹೋವನನ್ನ ಕೊಂಡಾಡಿದಳು!”

ಜಂಬು ಹುಲ್ಲಿನ ಪೊದೆಯಲ್ಲಿ ಪುಟ್ಟ ಹುಡುಗಿಯೊಬ್ಬಳು ಬಚ್ಚಿಟ್ಟುಕೊಂಡಿದ್ದಾಳೆ. ನಿಧಾನವಾಗಿ ಹರಿತಾ ಇದ್ದ ನೈಲ್‌ ನದಿಯ ಹತ್ರ ಗಾಬರಿಯಿಂದ ಸ್ವಲ್ಪನೂ ಅಲ್ಲಾಡದೆ ನಿಂತಿದ್ದಾಳೆ. ಸಮಯ ಕಳೀತ ಹೋದಂತೆ ಕಣ್ಣು ಮಿಟುಕಿಸದೇ ಒಂದೇ ಕಡೆ ನೋಡ್ತಾ ಕಾಯ್ತಿದ್ದಾಳೆ. ಕಾಯೋದ್ರಲ್ಲಿ ಎಷ್ಟು ಮುಳುಗಿ ಹೋಗಿದ್ದಾಳೆ ಅಂದ್ರೆ ಆಕೆ ಸುತ್ತ ಹುಳಗಳು ಗುಂಯ್‌ ಗುಟ್ತಿದ್ರೆ ಅದ್ರ ಪರಿವೇ ಅವಳಿಗೆ ಇಲ್ಲ. ಸುತ್ತ ಏನೇ ಆಗ್ತಿದ್ರೂ ಅವಳ ಗಮನ ಪೂರ್ತಿ ಜಂಬು ಹುಲ್ಲಿಂದ ಮಾಡಿದ ಬುಟ್ಟಿ ಮೇಲೆನೇ ಇತ್ತು. ನೀರು ಒಳಗೆ ಹೋಗದೇ ಇರೋ ತರ ಆ ಬುಟ್ಟಿನ ಮಾಡಿದ್ರು. ಅದ್ರಲ್ಲಿ ಈ ಪುಟ್ಟ ಹುಡುಗಿಯ ತಮ್ಮನನ್ನ ಇಟ್ಟಿದ್ರು. ‘ಅಯ್ಯೋ ನನ್ನ ತಮ್ಮ ಆ ಪೆಟ್ಟಿಲಿ ಒಬ್ಬನೇ ಇದ್ದಾನಲ್ಲಾ’ ಅಂತ ಅವಳಿಗೆ ಸಂಕಟ ಆಗ್ತಿತ್ತು. ಆದ್ರೆ ಅವಳ ಅಪ್ಪ ಅಮ್ಮ ಹೀಗೆ ಮಾಡಿರೋದು ಸರಿನೇ ಅಂತ ಅವಳಿಗೆ ಗೊತ್ತಿತ್ತು. ಮಗು ಜೀವ ಉಳಿಬೇಕು ಅಂದ್ರೆ ಅವ್ರಿಗೆ ಇದ್ದಿದ್ದು ಇದೊಂದೇ ದಾರಿ.

ಈ ಪುಟ್ಟ ಹುಡುಗಿಯ ದಿಟ್ಟತನವನ್ನು ಮೆಚ್ಚಲೇಬೇಕು. ಇನ್ನೂ ಸ್ವಲ್ಪದ್ರಲ್ಲೇ ವಯಸ್ಸಿಗೆ ಮೀರಿದ ದಿಟ್ಟತನ ತೋರಿಸೋಕೆ ಸಿದ್ಧವಾಗಿದ್ದಳು. ಅವಳ ಹೃದಯದಲ್ಲಿ ನಂಬಿಕೆ ಅನ್ನೋ ಗಿಡ ಚಿಗುರಿ ಹೆಮ್ಮರವಾಗೋದಕ್ಕೆ ಸಿದ್ಧ ಆಗ್ತಿತ್ತು. ಮುಂದೆ ಆದ ಘಟನೆ ಅವಳಲ್ಲಿ ನಂಬಿಕೆ ಮನೆ ಮಾಡಿತ್ತು ಅಂತ ತೋರಿಸುತ್ತೆ. ಈ ಗುಣ ಜೀವ್ನ ಪೂರ್ತಿ ಅವಳ ಮೇಲೆ ಪರಿಣಾಮ ಬೀರಿತು. ವಯಸ್ಸಾದಾಗ ನಡೆದ ಒಂದು ಅದ್ಭುತ ಘಟನೆಯಲ್ಲಿ ಅವಳನ್ನ ಮಾರ್ಗದರ್ಶಿಸಿತು. ತನ್ನ ಜೀವನದಲ್ಲಿ ಒಂದು ದೊಡ್ಡ ತಪ್ಪು ಮಾಡಿದಾಗ ತಿದ್ದುಕೊಳ್ಳೋಕೆ ಇದೇ ಗುಣ ಅವಳಿಗೆ ಸಹಾಯ ಮಾಡ್ತು. ಅವಳು ಯಾರು? ಅವಳು ತೋರಿಸಿದ ನಂಬಿಕೆಯಿಂದ ನಾವೇನು ಕಲೀಬಹುದು?

ದಾಸತ್ವದ ಕೂಪದಲ್ಲಿದ್ದ ಪುಟ್ಟ ಹುಡುಗಿ

ಆ ಪುಟ್ಟ ಹುಡುಗಿಯ ಹೆಸ್ರು ಏನು ಅಂತ ಬೈಬಲ್‌ ಹೇಳಲ್ಲ, ಆದ್ರೆ ಅವಳು ಯಾರು ಅಂತ ನಮ್ಗೆ ಚೆನ್ನಾಗಿ ಗೊತ್ತು. ಅವಳೇ ಮಿರ್ಯಾಮ್‌. ಅಮ್ರಾಮ್‌ ಮತ್ತು ಯೋಕೆಬೆದಳ ಮೊದಲನೇ ಮಗಳು. ಇಬ್ರಿಯರಾದ ಇವರು ಈಜಿಪ್ಟಿನಲ್ಲಿ ದಾಸರಾಗಿದ್ದರು. (ಅರಣ್ಯಕಾಂಡ 26:59) ನಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಅವಳ ತಮ್ಮಾನೇ ಮೋಶೆ. ಆರೋನ ಅವಳ ಮೊದಲನೇ ತಮ್ಮ. ಈ ಘಟನೆ ನಡೆದಾಗ ಆರೋನನಿಗೆ ಸುಮಾರು ಮೂರು ವರ್ಷ ಇದ್ದಿರಬೇಕು. ಮಿರ್ಯಾಮ್‌ಗೆ ಆಗ ವಯಸ್ಸು ಎಷ್ಟಿರಬಹುದು ಅಂತ ಗೊತ್ತಿಲ್ಲದೇ ಇದ್ರೂ ಹತ್ತು ವರ್ಷಕ್ಕಿಂತ ಕಮ್ಮಿ ಇದ್ದಿರಬಹುದು.

ಮಿರ್ಯಾಮಳ ಜನ ಕಣ್ಣೀರಲ್ಲೇ ಕೈ ತೊಳೀತಿದ್ದ ಸಮಯ ಅದು! ಈಜಿಪ್ಟಿನವರು ಇಬ್ರಿಯರನ್ನ ಕಾಲು ಕಸದ ತರ ನೋಡ್ತಿದ್ರು, ತುಂಬಾ ದಬ್ಬಾಳಿಕೆ ಮಾಡ್ತಿದ್ರು. ಅವ್ರು ಎಷ್ಟೇ ಕಷ್ಟ ಕೊಡ್ತಿದ್ರೂ ದಾಸರಾಗಿದ್ದ ಇವ್ರ ಸಂಖ್ಯೆ ಮಾತ್ರ ಜಾಸ್ತಿ ಆಗ್ತಿತ್ತು. ಇದ್ರಿಂದ ಭಯಪಟ್ಟ ಈಜಿಪ್ಟಿನವರು ಹೇಗಾದ್ರೂ ಅವ್ರನ್ನ ಮಟ್ಟ ಹಾಕಬೇಕು ಅಂತ ಯಾರು ಕಂಡು ಕೇಳದ ಒಂದು ಕ್ರೂರ ಕೆಲ್ಸಕ್ಕೆ ಕೈ ಹಾಕಿದ್ರು. ಫರೋಹ ಇಸ್ರಾಯೇಲ್ಯರ ಎಲ್ಲಾ ಎಳೇ ಗಂಡು ಮಕ್ಕಳನ್ನು ಸಾಯಿಸಲು ಆಜ್ಞೆ ಹೊರಡಿಸಿದ. ಆದ್ರೆ ಶಿಫ್ರಾ ಮತ್ತು ಪೂಗಾ ಅನ್ನೋ ಇಬ್ರಿಯ ಸೂಲಗಿತ್ತಿಯರು ರಾಜನ ಈ ಆಜ್ಞೆಯನ್ನ ಧಿಕ್ಕರಿಸಿ ಮಕ್ಕಳನ್ನ ಯಾರಿಗೂ ಗೊತ್ತಾಗದ ಹಾಗೆ ಕಾಪಾಡಿದರು. ಅವ್ರು ತೋರಿಸಿದ ಈ ನಂಬಿಕೆ ಬಗ್ಗೆ ಪುಟ್ಟ ಮಿರ್ಯಾಮಳಿಗೆ ಚೆನ್ನಾಗಿ ಗೊತ್ತಿತ್ತು.—ವಿಮೋಚನಕಾಂಡ 1:8-22.

ಮಿರ್ಯಾಮಳ ಹೆತ್ತವರು ಕೂಡ ನಂಬಿಕೆ ತೋರಿಸೋದ್ರಲ್ಲಿ ಒಳ್ಳೇ ಮಾದರಿಯಿಟ್ಟಿದ್ರು. ಮೋಶೆ ಹುಟ್ಟಿದಾಗ ಅಮ್ರಾಮ ಮತ್ತು ಯೋಕೆಬೆದ್‌ ತಮ್ಮ ಪುಟ್ಟ ಕಂದಮ್ಮನನ್ನ ಮೂರು ತಿಂಗಳು ಬಚ್ಚಿಟ್ಟು ಸಾಕಿದ್ರು. ಫರೋಹನ ಆಜ್ಞೆಗೆ ಭಯಪಟ್ಟು ತಮ್ಮ ಮಗುನ ಕೊಲ್ಲೋಕೆ ಅವ್ರು ಸಿದ್ಧ ಇರಲಿಲ್ಲ. (ಇಬ್ರಿಯ 11:23) ಆದ್ರೆ ಹೀಗೆ ಜಾಸ್ತಿ ದಿನ ಬಚ್ಚಿಡೋಕೂ ಅವ್ರಿಂದ ಆಗಲಿಲ್ಲ. ಆಗ ಮಗುನ ಕಾಪಾಡೋಕೆ ಒಂದು ದೊಡ್ಡ ನಿರ್ಣಯ ಮಾಡಲೇಬೇಕಾಯ್ತು. ಯೋಕೆಬೆದಳಿಂದ ಮೋಶೆ ದೂರ ಆಗೋ ಸಮಯ ಬಂದೇ ಬಿಡ್ತು. ಮಗು ತನ್ನಿಂದ ದೂರ ಆದ್ರೂ ಅದು ಸುರಕ್ಷಿತವಾದ ಜಾಗಕ್ಕೆ ಸೇರಬೇಕು, ಮಗು ಜೀವ ತೆಗೀದೆ ಬೆಳೆಸೋಂತವ್ರ ಕೈಗೆ ಸೇರಬೇಕು ಅನ್ನೋದು ಹೆತ್ತವ್ರ ಆಸೆ ಆಗಿತ್ತು. ಯೋಕೆಬೆದ ತನ್ನ ಮಗುನ ಇಡೋದಕ್ಕಾಗಿ ಜಂಬು ಹುಲ್ಲಿನ ಬುಟ್ಟಿಯನ್ನು ಎಣಿತಾ ಅದ್ರ ಒಳಗೆ ನೀರು ಹೋಗದೆ ಇರೋದಕ್ಕೆ ಜೇಡಿಮಣ್ಣು ಮತ್ತು ರಾಳವನ್ನು ಹಚ್ತಾ ಮನಸ್ಸಿನಲ್ಲಿ ‘ಯೆಹೋವನೇ ದಯವಿಟ್ಟು ಈ ಮಗುನ ಕಾಪಾಡಪ್ಪಾ’ ಅಂತ ಅದೆಷ್ಟು ಸಲ ಪ್ರಾರ್ಥನೆ ಮಾಡಿರಬಹುದು. ಆ ಬುಟ್ಟಿನ ನೈಲ್‌ ನದಿ ಹತ್ರ ಇಟ್ಟಾಗ ಹುಷಾರಾಗಿ ಮಗುನ ಯಾರು ತಗೊಂಡು ಹೋಗ್ತಾರೆ ಅಂತ ನೋಡ್ಕೊ ಅಂತ ಯೋಕೆಬೆದ್‌ ಮಿರ್ಯಾಮಳಿಗೆ ಹೇಳಿದಳು.—ವಿಮೋಚನಕಾಂಡ 2:1-4.

ರಕ್ಷಣೆಯ ಹೊಣೆ ಹೊತ್ತ ಮಿರ್ಯಾಮ್‌

ಅಮ್ಮ ಹೇಳಿದ ತರ ಮಿರ್ಯಾಮ್‌ ನೈಲ್‌ ನದಿ ಹತ್ರ ಕಾಯ್ತಿದ್ದಾಗ ಜನ ಬರ್ತಿರೋ ಸದ್ದು ಅವಳ ಕಿವಿಗೆ ಬಿತ್ತು. ಸ್ತ್ರೀಯರ ಗುಂಪೊಂದು ನದಿ ಕಡೆ ಬರ್ತಿತ್ತು. ಬರ್ತಿದ್ದವ್ರು ಸಾಮಾನ್ಯವಾದ ಸ್ತ್ರೀಯರಾಗಿರಲಿಲ್ಲ. ಫರೋಹನ ಮಗಳು ಮತ್ತು ಅವಳ ದಾದಿಯರು. ಸ್ನಾನಕ್ಕಾಗಿ ನೈಲ್‌ ನದಿ ಕಡೆ ಹೆಜ್ಜೆ ಹಾಕ್ತಿದ್ರು. ಅವರು ಬರ್ತಿದ್ದ ಹಾಗೆ ಮಿರ್ಯಾಮಳ ಹೃದಯ ಬಡಿತ ಜಾಸ್ತಿ ಆಯ್ತು. ಫರೋಹನ ಮಗಳೇ ರಾಜಾಜ್ಞೆಯನ್ನ ಮೀರಿ ಆ ಪುಟ್ಟ ಕಂದಮ್ಮನ ಜೀವ ಕಾಪಾಡ್ತಾಳಾ ಅನ್ನೋ ಪ್ರಶ್ನೆ ಮಿರ್ಯಾಮಳ ಮನಸ್ಸಿಗೆ ಬಂದಿರಬೇಕು. ಆಗ ಮಿರ್ಯಾಮ ಯೆಹೋವ ದೇವರ ಹತ್ರ ತುಂಬಾ ಸಲ ಪ್ರಾರ್ಥನೆ ಮಾಡಿರಬೇಕು.

ಫರೋಹನ ಮಗಳಿಗೆ ಜಂಬುಹುಲ್ಲಿನ ಮಧ್ಯದಲ್ಲಿದ್ದ ಬುಟ್ಟಿ ಕಣ್ಣಿಗೆ ಬಿತ್ತು. ಅದನ್ನ ತಗೊಂಡು ಬರುವಂತೆ ಅವಳು ತನ್ನ ದಾದಿಯರಿಗೆ ಹೇಳಿದಳು. ಫರೋಹನ ಮಗಳ ಬಗ್ಗೆ ಆ ವೃತ್ತಾಂತ ಹೀಗೆ ಹೇಳುತ್ತೆ, “ಅದನ್ನು ತೆರೆದು ನೋಡುವಾಗ ಆಹಾ, ಅಳುವ ಕೂಸು.” ಫರೋಹನ ಮಗಳಿಗೆ ಇದೊಂದು ಇಬ್ರಿಯರ ಮಗು, ಪ್ರಾಣ ಉಳಿಸೋಕೆ ಮಗುವಿನ ತಾಯಿ ಹೀಗೆ ಮಾಡಿರಬೇಕು ಅಂತ ಗೊತ್ತಾಯ್ತು. ಆದ್ರೆ ಆ ಮುದ್ದು ಮಗುವಿನ ಮುಖ ನೋಡಿದ ತಕ್ಷಣ ಅವಳ ಕರುಳು ಚುರ್‌ ಅಂತು. (ವಿಮೋಚನಕಾಂಡ 2:5, 6) ಚುರುಕಿನ ಮಿರ್ಯಾಮ್‌ಗೆ ಫರೋಹನ ಮಗಳ ಮುಖ ನೋಡಿನೇ ಅವಳ ಮನಸ್ಸಿನಲ್ಲಿ ಏನು ಅಂದ್ಕೊಳ್ತಿದ್ದಾಳೆ ಅಂತ ಗೊತ್ತಾಯ್ತು. ಯೆಹೋವನ ಮೇಲಿನ ತನ್ನ ನಂಬಿಕೆ ಕ್ರಿಯೆಲಿ ತೋರಿಸೋದಕ್ಕೆ ಇದೇ ಸರಿಯಾದ ಸಮಯ ಅಂತ ಅವಳಿಗೆ ಗೊತ್ತಾಯ್ತು. ಹೃದಯ ಗಟ್ಟಿ ಮಾಡ್ಕೊಂಡು ಅವ್ರ ಕಡೆ ಹೆಜ್ಜೆ ಹಾಕಿದ್ಳು.

ಇಬ್ರಿಯ ದಾಸಿಯಾಗಿದ್ದ ಇವಳು ರಾಣಿ ಹತ್ರ ಹೋದ್ರೆ ಅವಳ ಪ್ರತಿಕ್ರಿಯೆ ಹೇಗಿರುತ್ತೆ ಅಂತ ಗೊತ್ತಿಲ್ಲದೇ ಇದ್ರು ಮಿರ್ಯಾಮ್‌ ಧೈರ್ಯವಾಗಿ ಅವಳ ಹತ್ರ ಹೋದಳು. ನೇರವಾಗಿ ರಾಣಿಗೆ “ನಿನಗೋಸ್ಕರ ಈ ಕೂಸನ್ನು ಮೊಲೆಕೊಟ್ಟು ಸಾಕುವದಕ್ಕೆ ಇಬ್ರಿಯ ಸ್ತ್ರೀಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಲೋ” ಅಂತ ಕೇಳಿದಳು. ಅವಳು ಸರಿಯಾದ ಸಮಯಕ್ಕೆ ಸರಿಯಾದ ಪ್ರಶ್ನೆ ಕೇಳಿದಳು. ಯಾಕಂದ್ರೆ ಫರೋಹನ ಮಗಳು ಆ ಮಗುನಾ ಸಾಕೋ ಪರಿಸ್ಥಿತಿಲಿ ಇರಲಿಲ್ಲ. ಆ ಮಗು ಇಬ್ರಿಯರ ಮಧ್ಯೆ ಬೆಳೆದ್ರೆನೇ ಒಳ್ಳೇದು, ಅವನು ಬೆಳೆದು ದೊಡ್ಡವನಾದ ಮೇಲೆ ಅವನನ್ನ ತನ್ನ ಅರಮನೆಗೆ ಕರೆದುಕೊಂಡು ಬಂದು ವಿದ್ಯಾಭ್ಯಾಸ ಕೊಡಬೇಕು ಅಂತಿದ್ದಳು. ಅದಕ್ಕೆ ಫರೋಹನ ಮಗಳು ಮಿರ್ಯಾಮಳಿಗೆ “ಹಾಗೇ ಮಾಡು” ಅಂದಳು. ಈ ಮಾತನ್ನ ಕೇಳಿದಾಗ ಮಿರ್ಯಾಮಳ ಹೃದಯ ಅರಳಿರಬೇಕು.—ವಿಮೋಚನಕಾಂಡ 2:7, 8.

ಧೈರ್ಯದಿಂದ ತನ್ನ ತಮ್ಮನಿಗೆ ಏನೂ ಆಗಬಾರದು ಅಂತ ದೂರದಿಂದ ಮಿರ್ಯಾಮ್‌ ನೋಡ್ತಿದ್ದಾಳೆ

ಚಿಂತೆಯಲ್ಲಿ ಮುಳುಗಿ ಹೋಗಿದ್ದ ತನ್ನ ಅಪ್ಪ ಅಮ್ಮನ ಹತ್ರ ಮಿರ್ಯಾಮ ಓಡಿ ಹೋದಳು. ಏದುಸಿರು ಬಿಡ್ತಾ ಈ ಸಿಹಿಸುದ್ದಿನ ತನ್ನ ತಾಯಿಗೆ ತೊದಲ್ತಾ ಹೇಳ್ತಿರೋದನ್ನ ಸ್ವಲ್ಪ ಕಲ್ಪನೆ ಮಾಡಿಕೊಳ್ಳಿ. ಈ ಮಾತನ್ನ ಕೇಳಿದಾಗ ಯೋಕೆಬೆದಳಿಗೆ ಖಂಡಿತ ಇದಕ್ಕೆ ಯೆಹೋವನೇ ಕಾರಣ ಅಂತ ಗೊತ್ತಾಯ್ತು. ಅದಕ್ಕೆ ತಡಮಾಡದೇ ಮಿರ್ಯಾಮಳನ್ನ ಕರಕೊಂಡು ಫರೋಹನ ಮಗಳ ಹತ್ರ ಹೋದಳು. ಫರೋಹನ ಮಗಳು “ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನಗೋಸ್ಕರ ಸಾಕಮ್ಮಾ; ನಾನೇ ನಿನಗೆ ಸಂಬಳವನ್ನು ಕೊಡುವೆನು” ಅಂದಾಗ ಅವಳ ಮನಸ್ಸಿಗೆ ತುಂಬಾ ಸಂತೋಷ ನೆಮ್ಮದಿ ಆಯ್ತು. ಆದ್ರೆ ಯೋಕೆಬೆದ ಆ ಸಂತೋಷನ ತನ್ನ ಮುಖದಲ್ಲಿ ಒಂಚೂರು ತೋರಿಸಲಿಲ್ಲ.—ವಿಮೋಚನಕಾಂಡ 2:9.

ಆ ದಿನನಾ ಮಿರ್ಯಾಮ ಯಾವತ್ತು ಮರೀಲಿಲ್ಲ. ಯಾಕಂದ್ರೆ ಆವತ್ತು ತನ್ನ ದೇವರಾದ ಯೆಹೋವನ ಬಗ್ಗೆ ಅವಳು ತುಂಬಾ ವಿಷ್ಯಗಳನ್ನ ಕಲಿತಳು. ಯೆಹೋವನು ತನ್ನ ಜನ್ರನ್ನ ಕಾಪಾಡ್ತಾನೆ, ಅವ್ರ ಪ್ರಾರ್ಥನೆಗಳನ್ನ ಕೇಳ್ತಾನೆ, ಧೈರ್ಯ ಮತ್ತು ನಂಬಿಕೆ ದೊಡ್ಡವರ ಸ್ವತ್ತು ಅಲ್ಲ, ಚಿಕ್ಕ ಮಕ್ಕಳು ಕೂಡ ತೋರಿಸಬಹುದು ಅಂತ ಕಲಿತಳು. ಇದ್ರಿಂದ ಏನು ಗೊತ್ತಾಗುತ್ತೆ? ಯಾರು ನಂಬಿಗಸ್ತರಾಗಿ ಯೆಹೋವನಿಗೆ ಪ್ರಾರ್ಥಿಸ್ತಾರೋ ಅವ್ರ ಪ್ರಾರ್ಥನೆಗಳನ್ನು ಆತನು ಖಂಡಿತ ಕೇಳ್ತಾನೆ. (ಕೀರ್ತನೆ 65:2) ನಾವು ಜೀವನ ಮಾಡ್ತಿರೋ ಈ ಕಷ್ಟದ ಸಮಯದಲ್ಲಿ ಚಿಕ್ಕವರಾಗಿರಲಿ ದೊಡ್ಡವರಾಗಿರಲಿ, ಗಂಡಸರಾಗಿರಲಿ, ಹೆಂಗಸರಾಗಿರಲಿ ಈ ವಿಷ್ಯನಾ ಜ್ಞಾಪಕದಲ್ಲಿ ಇಟ್ಕೊಬೇಕು.

ತಾಳ್ಮೆ ತೋರಿಸಿದ ಮೋಶೆಯ ಅಕ್ಕ

ಯೋಕೆಬೆದ ತನ್ನ ಪುಟ್ಟ ಕಂದನನ್ನ ಚೆನ್ನಾಗಿ ಸಾಕಿ ಸಲಹಿದಳು. ದಿಟ್ಟತನ ತೋರಿಸಿ ಕಾಪಾಡಿದ ತನ್ನ ತಮ್ಮನನ್ನ ಮಿರ್ಯಾಮ್‌ ಎಷ್ಟು ಹಚ್ಚಿಕೊಂಡಿರಬಹುದು ಅಂತ ಸ್ವಲ್ಪ ಯೋಚಿಸಿ. ಮೋಶೆಯ ಮೊದಲ ತೊದಲು ಮಾತುಗಳನ್ನ ಕೇಳಿದಾಗ ಅದ್ರಲ್ಲೂ ಅವನ ಬಾಯಿಂದ ಯೆಹೋವನ ಹೆಸ್ರನ್ನು ಕೇಳಿದಾಗ ಅವಳಿಗೆ ತುಂಬ ಖುಷಿಯಾಗಿರಬೇಕು. ಮೋಶೆ ಬೆಳೆದು ದೊಡ್ಡವನಾದ. ಫರೋಹನ ಮಗಳ ಹತ್ರ ಅವನನ್ನ ಕರಕೊಂಡು ಹೋಗೋ ಸಮಯ ಬಂದೇ ಬಿಡ್ತು. (ವಿಮೋಚನಕಾಂಡ 2:10) ಆಗ ಇಡೀ ಕುಟುಂಬಕ್ಕೆ ತುಂಬಾ ಸಂಕಟ ಆಗಿರಬೇಕು. ರಾಣಿಯ ಮಗನಾಗಿ ಅವನು ಹೇಗೆ ಇರ್ತಾನೆ ಅಂತ ನೋಡೋ ಕಾತುರ ಮಿರ್ಯಾಮಳಿಗೆ ಇತ್ತು. ಈಜಿಪ್ಟಿನ ಅರಮನೆಯ ರಾಜ ವೈಭೋಗದಲ್ಲಿ ಬೆಳೆಯೋ ಮೋಶೆ ಯೆಹೋವನ ಮೇಲಿನ ತನ್ನ ಪ್ರೀತಿಯನ್ನ ಹಾಗೆ ಉಳಿಸಿಕೊಳ್ತಾನಾ?

ಸಮಯ ಹೋದಂತೆ ಇದಕ್ಕೆ ಉತ್ರ ಸಿಕ್ತು. ತನ್ನ ತಮ್ಮ ಬೆಳೆದು ದೊಡ್ಡವನಾದ ಮೇಲೆ ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ತೇಲೋ ಬದಲು ಯೆಹೋವನನ್ನ ಆರಾಧನೆ ಮಾಡೋ ಆಯ್ಕೆ ಮಾಡಿದ. ಇದನ್ನು ನೋಡಿದಾಗ ಮಿರ್ಯಾಮಳ ಮನಸ್ಸು ಹೆಮ್ಮೆಯಿಂದ ಹಿಗ್ಗಿರಬೇಕು. ಮೋಶೆಗೆ 40 ವರ್ಷ ಆದಾಗ ಅವನು ತನ್ನ ಜನರ ಪರವಾಗಿ ನಿಂತ. ಇಬ್ರಿಯ ದಾಸನೊಬ್ಬನನ್ನ ಈಜಿಪ್ಟಿನವನು ಹಿಂಸೆ ಮಾಡ್ತಿದ್ದನ್ನ ನೋಡಿ ಮೋಶೆಯ ರಕ್ತ ಕುದೀತು. ಅದಕ್ಕೆ ಅವನು ಆ ಈಜಿಪ್ಟಿನವನನ್ನು ಕೊಂದು ತನ್ನ ಪ್ರಾಣ ಉಳಿಸಿಕೊಳ್ಳೋಕೆ ಅಲ್ಲಿಂದ ಓಡಿಹೋದ.—ವಿಮೋಚನಕಾಂಡ 2:11-15; ಅಪೊಸ್ತಲರ ಕಾರ್ಯ 7:23-29; ಇಬ್ರಿಯ 11:24-26.

ಇಲ್ಲಿಂದ ಸುಮಾರು 40 ವರ್ಷ ತನ್ನ ತಮ್ಮನ ಬಗ್ಗೆ ಮಿರ್ಯಾಮಗೆ ಸುದ್ದಿನೇ ಇರಲಿಲ್ಲ. ಅವನು ಮಿದ್ಯಾನಿನಲ್ಲಿ ಕುರಿಮೇಯಿಸುತ್ತಾ ಇದ್ದ. (ವಿಮೋಚನಕಾಂಡ 3:1; ಅಪೊಸ್ತಲರ ಕಾರ್ಯ 7:29, 30) ಮಿರ್ಯಾಮಳಿಗೂ ವಯಸ್ಸಾಗ್ತಾ ಹೋದಂತೆ ತನ್ನ ಜನರನ್ನು ಈಜಿಪ್ಟಿನವರು ಹಿಂಸೆ ಮಾಡೋದು ಜಾಸ್ತಿ ಆಗ್ತಾ ಹೋಯ್ತು.

ಪ್ರವಾದಿನಿಯಾದ ಮಿರ್ಯಾಮ್‌

ತನ್ನ ಜನರನ್ನ ಬಿಡಿಸೋಕೆ ಮೋಶೆನ ದೇವರು ಈಜಿಪ್ಟಿಗೆ ವಾಪಸ್ಸು ಕಳುಹಿಸಿದಾಗ ಮಿರ್ಯಾಮಳಿಗೆ 80ಕ್ಕಿಂತ ಜಾಸ್ತಿ ವಯಸ್ಸಾಗಿತ್ತು. ಆರೋನನು ಮೋಶೆ ಪರವಾಗಿ ಫರೋಹನ ಹತ್ರ ಮಾತಾಡಿದ. ಇವರಿಬ್ಬರು ದೇವಜನರನ್ನ ಬಿಡುಗಡೆ ಮಾಡಿ ಅಂತ ಕೇಳಿದಾಗ, ಫರೋಹ ಅವರ ಮಾತಿಗೆ ಮೂರು ಕಾಸಿನ ಬೆಲೆ ಕೊಡದೇ ಮತ್ತೆ ಮತ್ತೆ ವಾಪಸ್ಸು ಕಳುಹಿಸಿದ. ಆಗ ಯೆಹೋವ ಈಜಿಪ್ಟಿನವರ ಮೇಲೆ ಹತ್ತು ಬಾಧೆಗಳನ್ನು ತಂದನು. ಈ ಎಲ್ಲಾ ಸಮಯದಲ್ಲಿ ಮಿರ್ಯಾಮ ತನ್ನ ಇಬ್ಬರು ತಮ್ಮಂದಿರಿಗೆ ಧೈರ್ಯ ತುಂಬಿ, ಬೆಂಬಲ ಕೊಟ್ಟಳು. ಯೆಹೋವನು ಈಜಿಪ್ಟಿನವರ ಮೇಲೆ ಹತ್ತನೇ ಬಾಧೆ ಅಂದ್ರೆ ಚೊಚ್ಚಲ ಮಕ್ಕಳು ಸತ್ತು ಹೋಗೋ ಬಾಧೆ ತಂದಾಗ ಫರೋಹ ಇಸ್ರಾಯೇಲ್ಯರಿಗೆ ಹೋಗೋಕೆ ಅನುಮತಿ ಕೊಟ್ಟ. ಅಂತು ಇಂತೂ ಇಸ್ರಾಯೇಲ್ಯರಿಗೆ ಬಿಡುಗಡೆಯ ಭಾಗ್ಯ ಸಿಕ್ತು! ಮೋಶೆ ಇಸ್ರಾಯೇಲ್ಯರನ್ನ ಮುನ್ನಡೆಸ್ತಾ ಹೋದ ಹಾಗೆ ಮಿರ್ಯಾಮ ತನ್ನಿಂದಾದ ಎಲ್ಲಾ ಬೆಂಬಲ ಕೊಟ್ಟಳು.—ವಿಮೋಚನಕಾಂಡ 4:14-16, 27-31; 7:1–12:51.

ಆಮೇಲೆ ಇಸ್ರಾಯೇಲ್ಯರು ಕೆಂಪು ಸಮುದ್ರ ಮತ್ತು ಈಜಿಪ್ಟಿನ ಸೈನ್ಯದ ಮಧ್ಯೆ ಸಿಕ್ಕಿ ಹಾಕಿಕೊಂಡಾಗ ತನ್ನ ತಮ್ಮ ಮೋಶೆ ಕೋಲನ್ನ ಕೆಂಪು ಸಮುದ್ರದ ಮೇಲೆ ಚಾಚಿದ್ದನ್ನ ಮಿರ್ಯಾಮ ನೋಡಿದಳು. ಅವನು ಚಾಚಿದ್ದೇ ತಡ ಕೆಂಪು ಸಮುದ್ರ ಇಬ್ಬಾಗ ಆಗೋಯ್ತು! ಜನ ಒಣನೆಲದ ಮೇಲೆ ನಡ್ಕೊಂಡು ಹೋಗೋದನ್ನ ನೋಡಿ ಮಿರ್ಯಾಮಳಿಗೆ ಯೆಹೋವನ ಮೇಲಿದ್ದ ನಂಬಿಕೆ ಮುಂಚೆಗಿಂತ ಜಾಸ್ತಿ ಆಯ್ತು. ತನ್ನ ದೇವರಾದ ಯೆಹೋವನಿಗೆ ತನ್ನ ಉದ್ದೇಶವನ್ನು ನೆರವೇರಿಸೋಕೆ ಏನು ಬೇಕಾದ್ರೂ ಮಾಡೋ ಶಕ್ತಿ ಇದೆ ಅಂತ ಅವಳಿಗೆ ಚೆನ್ನಾಗಿ ಗೊತ್ತಾಯ್ತು.—ವಿಮೋಚನಕಾಂಡ 14:1-31.

ಇಸ್ರಾಯೇಲ್ಯರು ಸುರಕ್ಷಿತವಾಗಿ ಕೆಂಪು ಸಮುದ್ರನ ದಾಟಿದ್ರು. ಆದ್ರೆ ಪ್ರಬಲವಾಗಿದ್ದ ಫರೋಹನ ಸೈನ್ಯ ನೀರು ಪಾಲಾಗಿದ್ದನ್ನು ನೋಡಿ ಇಡೀ ವಿಶ್ವದಲ್ಲೇ ಯೆಹೋವನಷ್ಟು ಬಲಶಾಲಿ ಯಾರು ಇಲ್ಲ ಅಂತ ಮಿರ್ಯಾಮಳಿಗೆ ಗೊತ್ತಾಯ್ತು. ಈ ಘಟನೆ ಆದ ಮೇಲೆ ಎಲ್ಲರೂ ಯೆಹೋವನಿಗೆ ಒಂದು ಹಾಡು ಹಾಡೋ ಮೂಲಕ ಆತನನ್ನ ಕೊಂಡಾಡಿದರು. ಇದಕ್ಕೆ ಪ್ರತಿಯಾಗಿ ಸ್ತ್ರೀಯರ ಗುಂಪನ್ನು ಮುನ್ನಡೆಸ್ತಾ ಮಿರ್ಯಾಮ “ಯೆಹೋವನನ್ನು ಗಾನಮಾಡಿರಿ; ಆತನು ಮಹಾಜಯಶಾಲಿಯಾದನು ಕುದುರೆಗಳನ್ನೂ ರಾಹುತರನ್ನೂ ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ” ಅಂತ ಹಾಡಿದಳು.—ವಿಮೋಚನಕಾಂಡ 15:20, 21; ಕೀರ್ತನೆ 136:15.

ಕೆಂಪು ಸಮುದ್ರದ ಹತ್ರ ವಿಜಯಗೀತೆಯನ್ನ ಹೆಂಗಸರ ಗುಂಪಿನ ಜೊತೆ ಹಾಡುವಾಗ ಮುಂದಾಳತ್ವ ವಹಿಸ್ತಿರುವ ಮಿರ್ಯಾಮ್‌

ಇದು ಮಿರ್ಯಾಮಳ ಜೀವನದಲ್ಲಿ ಮರೆಯೋಕೆ ಆಗದ ದಿನವಾಗಿತ್ತು. ಈ ಸಮಯದಲ್ಲೇ ಬೈಬಲ್‌ ಮಿರ್ಯಾಮಳನ್ನು ಪ್ರವಾದಿನಿ ಅಂತ ಕರೆಯುತ್ತೆ. ಬೈಬಲಿನಲ್ಲಿ ತಿಳಿಸಿರೋ ಮೊದಲನೇ ಪ್ರವಾದಿನಿ ಇವಳೇ. ಯೆಹೋವನಿಗೆ ವಿಶೇಷವಾಗಿ ಸೇವೆ ಸಲ್ಲಿಸಿದ ಬೆರಳೆಣಿಕೆ ಸ್ತ್ರೀಯರಲ್ಲಿ ಮಿರ್ಯಾಮಳು ಒಬ್ಬಳು.—ನ್ಯಾಯಸ್ಥಾಪಕರು 4:4; 2 ಅರಸು 22:14; ಯೆಶಾಯ 8:3; ಲೂಕ 2:36.

ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಯೆಹೋವನು ತನ್ನ ಭಕ್ತರನ್ನ ನೋಡ್ತಾನೆ, ಅವ್ರ ಚಿಕ್ಕಪುಟ್ಟ ಯಥಾರ್ಥ ಪ್ರಯತ್ನಗಳನ್ನ, ತಾಳ್ಮೆನ, ಆತನನ್ನ ಆರಾಧಿಸೋಕೆ ಇರೋ ಮನಸ್ಸನ್ನ ಮೆಚ್ಚಿಕೊಳ್ತಾನೆ. ನಾವು ಯುವಕರಾಗಿರಲಿ, ವಯಸ್ಸಾದವರಾಗಿರಲಿ, ಹುಡುಗ ಆಗಿರಲಿ, ಹುಡುಗಿ ಆಗಿರಲಿ ಯೆಹೋವನಿಗೆ ನಂಬಿಗಸ್ತರಾಗಿ ಇರಬಹುದು. ಇಂಥಾ ನಂಬಿಕೆ ತೋರಿಸೋದಾದ್ರೆ ಯೆಹೋವನಿಗೆ ಖುಷಿ ಆಗುತ್ತೆ. ಅಂಥವ್ರನ್ನ ಆತನು ಯಾವತ್ತೂ ಮರಿಯಲ್ಲ, ತಕ್ಕ ಪ್ರತಿಫಲನಾ ಕೊಟ್ಟೇ ಕೊಡ್ತಾನೆ. (ಇಬ್ರಿಯ 6:10; 11:6) ಇದ್ರಲ್ಲಿ ಮಿರ್ಯಾಮ ನಮ್ಮೆಲ್ಲರಿಗೂ ಒಳ್ಳೇ ಮಾದರಿ ಅಲ್ವಾ?

ಅಹಂಕಾರ ಪಟ್ಟ ಮಿರ್ಯಾಮ

ಅಧಿಕಾರ ಮತ್ತು ಸುಯೋಗಗಳು ಆಶೀರ್ವಾದ ತರುತ್ತೆ ನಿಜ. ಆದ್ರೆ ಅದ್ರಲ್ಲಿ ಅಪಾಯಗಳು ಕೂಡ ಇದೆ. ಇಸ್ರಾಯೇಲ್ಯರು ದಾಸತ್ವದಿಂದ ಬಿಡುಗಡೆ ಆದ ಮೇಲೆ ಮಿರ್ಯಾಮಳು ತುಂಬಾ ಹೆಸರುವಾಸಿಯಾದಳು. ಈ ಪ್ರಸಿದ್ಧಿ ಅವಳಲ್ಲಿ ಅಹಂಕಾರ ಮನೆ ಮಾಡೋ ತರ ಮಾಡ್ತಾ? (ಜ್ಞಾನೋಕ್ತಿ 16:18) ಹೌದು, ದುಃಖದ ವಿಷ್ಯ ಏನಂದ್ರೆ ಸ್ವಲ್ಪ ಸಮಯ ಅವಳು ಅಹಂಕಾರಿ ಆದಳು.

ಇಸ್ರಾಯೇಲ್ಯರು ಈಜಿಪ್ಟಿನಿಂದ ಬಿಡುಗಡೆ ಆಗಿ ಕೆಲವು ತಿಂಗಳಾಗಿತ್ತು. ಆಗ ಮೋಶೆ ತನ್ನ ಮಾವ ಇತ್ರೋ, ಹೆಂಡ್ತಿ ಚಿಪ್ಪೋರ ಹಾಗೂ ಇಬ್ರೂ ಗಂಡು ಮಕ್ಕಳನ್ನು ಮಿದ್ಯಾನಿಂದ ಕರಕೊಂಡು ಬಂದ. ಮೋಶೆ 40 ವರ್ಷ ಮಿದ್ಯಾನಿನಲ್ಲಿ ಇದ್ದಾಗ ಅವಳನ್ನ ಮದ್ವೆ ಆಗಿದ್ದ. ಅಪ್ಪನನ್ನ ನೋಡೋಕೆ ಸ್ವಲ್ಪ ಸಮಯ ಅವಳು ಮಿದ್ಯಾನಿಗೆ ಹೋಗಿದ್ದಳು. ಈಗ ಇತ್ರೋ ತನ್ನ ಮಗಳನ್ನು ವಾಪಸ್ಸು ಇಸ್ರಾಯೇಲ್ಯರ ಡೇರೆಗೆ ಕರಕೊಂಡು ಬಂದ. (ವಿಮೋಚನಕಾಂಡ 18:1-5) ಅವಳು ವಾಪಸ್ಸು ಬಂದಾಗ ಇಸ್ರಾಯೇಲ್ಯರಿಗೆ ತುಂಬ ಕುತೂಹಲ ಇತ್ತು. ಇಸ್ರಾಯೇಲ್ಯರನ್ನ ಈಜಿಪ್ಟಿನಿಂದ ಬಿಡಿಸೋಕೆ ದೇವರು ಆರಿಸಿಕೊಂಡ ವ್ಯಕ್ತಿಯ ಹೆಂಡತಿನ ನೋಡೋಕೆ ಜನ ಕಾತುರದಿಂದ ಕಾಯ್ತಿದ್ರು.

ಇದೇ ಕಾತುರ, ಕುತೂಹಲ ಮಿರ್ಯಾಮಳಿಗೂ ಇತ್ತಾ? ಮೊದಮೊದಲು ಇತ್ತು. ಆಮೇಲೆ ಅಹಂಕಾರ ಅನ್ನೋ ಪರದೆ ಅವಳ ಕಣ್ಣನ್ನ ಮುಚ್ಚಿಬಿಡ್ತು. ಎಲ್ಲಿ ಚಿಪ್ಪೋರ ತನ್ನ ಸ್ಥಾನನ ಕಿತ್ತುಕೊಂಡು ದೇಶದಲ್ಲಿ ಪ್ರಸಿದ್ಧಿ ಆಗಿಬಿಡ್ತಾಳೋ ಅನ್ನೋ ಭಯ ಇವಳನ್ನ ಕಾಡೋಕೆ ಶುರು ಆಯ್ತು. ಆರೋನ ಮತ್ತು ಮಿರ್ಯಾಮ ಚಿಪ್ಪೋರಳ ಬಗ್ಗೆ ತಪ್ಪು ಹುಡುಕೋಕೆ ಶುರು ಮಾಡಿದ್ರು. ಈ ಮಾತುಗಳು ಉರಿಯೋ ಬೆಂಕಿಗೆ ತುಪ್ಪ ಹಾಕೋ ತರ ಅವರಲ್ಲಿ ಅವಳ ಮೇಲಿನ ಕಹಿ ಭಾವನೆನ ಜಾಸ್ತಿ ಮಾಡ್ತು. ಆರಂಭದಲ್ಲಿ ಚಿಪ್ಪೋರ ಬಗ್ಗೆ ‘ಅವಳು ಇಸ್ರಾಯೇಲ್ಯ ಸ್ತ್ರೀ ಅಲ್ಲ, ಕೂಷ್‌ ದೇಶದವಳು’ * ಅಂತ ತಪ್ಪಾಗಿ ಮಾತಾಡೋಕೆ ಶುರು ಮಾಡಿದ್ರು. ಆಮೇಲೆ ಅವ್ರ ಈ ಮಾತು ಎಲ್ಲಿಗೆ ನಡೆಸ್ತು ಅಂದ್ರೆ ಕೊನೆಗೆ ಮೋಶೆನೇ ಸರಿಯಿಲ್ಲ ಅಂತ ಹೇಳೋಕೆ ಶುರು ಮಾಡಿದ್ರು. ಮಿರ್ಯಾಮ ಮತ್ತು ಆರೋನ “ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತಾಡಿದ್ದಾನೋ; ನಮ್ಮ ಮೂಲಕವೂ ಆತನು ಮಾತಾಡಲಿಲ್ಲವೇ” ಅಂತ ಹೇಳೋಷ್ಟರ ಮಟ್ಟಿಗೆ ಹೋದ್ರು.—ಅರಣ್ಯಕಾಂಡ 12:1, 2.

ಕುಷ್ಠಕ್ಕೆ ತುತ್ತಾದ ಮಿರ್ಯಾಮ

ಮಿರ್ಯಾಮ ಮತ್ತು ಆರೋನ ಹೀಗೆ ಮಾತಾಡ್ತಾ ವಿಷದ ಬೀಜ ತಮ್ಮ ಹೃದಯದಲ್ಲಿ ಮೊಳಕೆ ಒಡೆಯೋ ತರ ಬಿಟ್ಟುಕೊಟ್ರು. ಯೆಹೋವನು ಮೋಶೆಗೆ ಹೆಚ್ಚು ಸುಯೋಗ ಕೊಡ್ತಾ ಇದ್ದಿದ್ದನ್ನ ನೋಡಿ ಅವ್ರಿಂದ ಸಹಿಸೋಕೆ ಆಗಲಿಲ್ಲ. ತಮಗೂ ಅವನ ತರ ಹೆಚ್ಚು ಅಧಿಕಾರ ಮತ್ತು ಘನತೆ ಬೇಕು ಅಂತ ಬಯಸಿದ್ರು. ಹಾಗಾದ್ರೆ ಮೋಶೆನೂ ತನ್ನ ಅಧಿಕಾರನಾ ದುರುಪಯೋಗಿಸಿ ಹೆಚ್ಚು ಪ್ರಭಾವಿ ವ್ಯಕ್ತಿ ಆಗಬೇಕು ಅಂತ ಇದ್ದನಾ? ಮೋಶೆನೂ ತಪ್ಪು ಮಾಡ್ತಿದ್ದ. ಆದ್ರೆ ಅವನಲ್ಲಿ ಹೆಮ್ಮೆ, ಅಹಂಕಾರ ಇರಲಿಲ್ಲ. ಅದಕ್ಕೆ ಬೈಬಲ್‌ ಅವನ ಬಗ್ಗೆ “ಆ ಮೋಶೆ ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು” ಅಂತ ಹೇಳುತ್ತೆ. ಮಿರ್ಯಾಮ ಮತ್ತು ಆರೋನ ಹದ್ದು ಮೀರಿ ಮೋಶೆಯ ವಿರುದ್ಧ ಮಾತಾಡಿ ತಮಗೆ ತಾವೇ ಹಳ್ಳ ತೋಡ್ಕೊಂಡ್ರು. ಯಾಕಂದ್ರೆ ಇದನ್ನೆಲ್ಲಾ ‘ಯೆಹೋವನು ಕೇಳಿಸಿಕೊಳ್ತಾ ಇದ್ದನು.’—ಅರಣ್ಯಕಾಂಡ 12:3, 4.

ಯೆಹೋವ ದೇವರು ಈ ಮೂವರನ್ನು ದೇವದರ್ಶನದ ಗುಡಾರದ ಹತ್ರ ಬರೋಕೆ ಹೇಳಿದ್ರು. ಯೆಹೋವನ ಸಾನಿಧ್ಯವನ್ನು ಸೂಚಿಸುತ್ತಿದ್ದ ಮೇಘಸ್ತಂಭದಿಂದ ಆತನು ಇಳಿದು ಬಂದು ದೇವದರ್ಶನದ ಗುಡಾರದ ಬಾಗಿಲಲ್ಲಿ ನಿಂತನು. ಯೆಹೋವ ದೇವರು ಮಿರ್ಯಾಮ ಮತ್ತು ಆರೋನನನ್ನ ಗದರಿಸಿ ತನ್ನ ಮತ್ತೆ ಮೋಶೆ ಮಧ್ಯೆ ಇರುವ ಅಪರೂಪದ ಸಂಬಂಧದ ಬಗ್ಗೆ ತಿಳಿಸಿದನು. ಅವನ ಮೇಲೆ ಇದ್ದ ಅಪಾರ ನಂಬಿಕೆಯಿಂದ ಅವನಿಗೆ ಈ ಸ್ಥಾನ ಕೊಟ್ಟೆ ಅಂದನು. “ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತಾಡುವದಕ್ಕೆ ಭಯಪಡಬೇಕಾಗಿತ್ತು” ಅಂತ ಕೋಪದಿಂದ ಹೇಳಿದನು. ಈ ಮಾತುಗಳನ್ನ ಕೇಳಿದಾಗ ಮಿರ್ಯಾಮ ಮತ್ತು ಆರೋನನ ಹೃದಯ ಭಯದಿಂದ ಕರಗಿ ನೀರಾಯ್ತು. ಅವ್ರು ಮೋಶೆಯ ವಿರುದ್ಧ ಮಾತಾಡಿದ್ದನ್ನ ತನ್ನ ವಿರುದ್ಧನೇ ಮಾತಾಡಿದ ತರ ಯೆಹೋವನು ನೋಡಿದನು.—ಅರಣ್ಯಕಾಂಡ 12: 4-8.

ಇಷ್ಟೆಲ್ಲಾ ಆಗೋದಕ್ಕೆ ಮಿರ್ಯಾಮನೇ ಕಾರಣ. ತನ್ನ ತಮ್ಮನ ಹೆಂಡ್ತಿ ವಿರುದ್ಧ ಮಾತಾಡೋಕೆ ಮಿರ್ಯಾಮನೇ ಆರೋನನಿಗೆ ಕುಮ್ಮಕ್ಕು ಕೊಟ್ಟಳು. ಅದ್ರಿಂದನೇ ದೇವ್ರು ಅವಳಿಗೆ ಶಿಕ್ಷೆ ಕೊಟ್ಟು ಕುಷ್ಠಕ್ಕೆ ತುತ್ತಾಗೋ ತರ ಮಾಡಿದನು. ಆ ಕಾಯಿಲೆಯಿಂದ “ಆಕೆಯ ಚರ್ಮ ಹಿಮದಂತೆ ಬೆಳ್ಳಗಾಗಿ ಹೋಗಿತ್ತು.” ತಕ್ಷಣ ಆರೋನ ತನ್ನನ್ನ ಮೋಶೆ ಮುಂದೆ ತಗ್ಗಿಸಿಕೊಂಡು ‘ನಾವು ವಿವೇಕವಿಲ್ಲದೆ ನಡೆದುಕೊಂಡ್ವಿ’ ಅಂತ ತಮ್ಮ ಪಾಪನ ಒಪ್ಪಿಕೊಂಡ್ರು. ಆಗ ಸಾತ್ವಿಕನಾದ ಮೋಶೆ ಯೆಹೋವನಿಗೆ “ದೇವಾ, ಆಕೆಯನ್ನು ವಾಸಿಮಾಡಬೇಕೆಂದು ಬೇಡುತ್ತೇನೆ” ಅಂತ ಪ್ರಾರ್ಥಿಸಿದನು. (ಅರಣ್ಯಕಾಂಡ 12:9-13) ಮಿರ್ಯಾಮ್‌ ತಪ್ಪು ಮಾಡಿದ್ರೂ ಅವಳ ಮೇಲೆ ಇವರಿಬ್ಬರಿಗೆ ಎಷ್ಟು ಪ್ರೀತಿ ಇತ್ತು ಅಂತ ಇದ್ರಿಂದ ಗೊತ್ತಾಗುತ್ತೆ.

ಪಾಠ ಕಲಿತು ಮುಂದೆ ಹೋದ ಮಿರ್ಯಾಮ್‌

ಇವರ ಪ್ರಾರ್ಥನೆ ಕೇಳಿ ಪಶ್ಚಾತ್ತಾಪಪಟ್ಟ ಮಿರ್ಯಾಮಳ ಕುಷ್ಠವನ್ನ ಕರುಣೆಯಿಂದ ಯೆಹೋವ ದೇವರು ವಾಸಿಮಾಡಿದನು. ಆದ್ರೆ ಅವಳು ಉಪ್ಪು ತಿಂದ ಮೇಲೆ ನೀರು ಕುಡಿಲೇಬೇಕು ಅನ್ನೋ ತರ 7 ದಿನಗಳ ವರೆಗೆ ಗುಡಾರದಿಂದ ದೂರ ಇದ್ದು ಶಿಕ್ಷೆ ಅನುಭವಿಸಿದಳು. ಈ ಶಿಕ್ಷೆನ ಅನುಭವಿಸೋದಿಕ್ಕೆ ಅವಳಿಗೆ ಎಲ್ಲರ ಮುಂದೆ ತುಂಬ ನಾಚಿಕೆ ಆಗಿದ್ದಿರಬೇಕು. ಆದ್ರೂ ಅವಳು ತೋರಿಸಿದ ನಂಬಿಕೆಯಿಂದ ಅವಳ ಪ್ರಾಣ ಉಳಿಯಿತು. ಯೆಹೋವನು ಶಿಕ್ಷೆ ಕೊಡ್ತಿರೋದು ನ್ಯಾಯವಾಗಿದೆ, ತನ್ನ ಮೇಲಿರೋ ಪ್ರೀತಿಯಿಂದಾನೆ ದೇವರು ಹೀಗೆ ಮಾಡಿದನು ಅಂತ ಅವಳಿಗೆ ಚೆನ್ನಾಗಿ ಗೊತ್ತಿತ್ತು. ಅದಿಕ್ಕೆ ದೇವರು ಏನು ಹೇಳಿದ್ರೋ ಅದೇ ತರ ನಡಕೊಂಡಳು. 7 ದಿನ ಇವಳೊಬ್ಬಳೇ ಡೇರೆಯಿಂದ ದೂರ ಇದ್ದಾಗ ಇಸ್ರಾಯೇಲ್ಯರು ಪ್ರಯಾಣ ಮಾಡದೇ ಇವಳಿಗೋಸ್ಕರ ಕಾಯ್ತಿದ್ರು. ತನ್ನನ್ನ ತಗ್ಗಿಸಿಕೊಳ್ಳೋ ಮೂಲಕ ಮಿರ್ಯಾಮ್‌ ನಂಬಿಕೆ ತೋರಿಸಿದ್ರಿಂದ ಅವಳನ್ನ ‘ಪಾಳೆಯಕ್ಕೆ ಮತ್ತೆ ಸೇರಿಸಿಕೊಂಡ್ರು.’—ಅರಣ್ಯಕಾಂಡ 12:14, 15.

ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರಿಗೇ ಶಿಸ್ತನ್ನು ಕೊಡ್ತಾನೆ. (ಇಬ್ರಿಯ 12:5, 6) ಮಿರ್ಯಾಮಳ ಮೇಲಿದ್ದ ಪ್ರೀತಿಯಿಂದನೇ ದೇವರು ಅವಳಲ್ಲಿದ್ದ ಅಹಂಕಾರನ ಸರಿಮಾಡಿ ತಿದ್ದಿ ಬುದ್ಧಿ ಕಲಿಸಿದನು. ಶಿಕ್ಷೆ ಕೊಟ್ಟಾಗ ಅವಳಿಗೆ ತುಂಬ ನೋವಾಗಿದ್ದು ನಿಜನೇ ಆದ್ರೆ ಅದ್ರಿಂದ ಅವಳ ಜೀವ ಉಳೀತು. ಯೆಹೋವನ ಮೇಲೆ ನಂಬಿಕೆ ಇಟ್ಟು ದೀನತೆಯಿಂದ ಶಿಸ್ತನ್ನ ಸ್ವೀಕರಿಸಿದಳು, ಯೆಹೋವನ ಅನುಗ್ರಹ ಮತ್ತೆ ಪಡ್ಕೊಂಡಳು. ಇಸ್ರಾಯೇಲ್ಯರ ಅರಣ್ಯವಾಸ ಕೊನೆಯಾಗೋ ವರೆಗೂ ಆಕೆ ಜೀವಂತವಾಗಿದ್ದಳು. ಚಿನ್‌ ಅರಣ್ಯಪ್ರದೇಶದ ಕಾದೇಶ್‌ ಬಳಿಯಲ್ಲಿ ತನ್ನ ಕೊನೆಯುಸಿರೆಳೆದಾಗ ಅವಳಿಗೆ ಹತ್ರ ಹತ್ರ 130 ವರ್ಷ. * (ಅರಣ್ಯಕಾಂಡ 20:1) ಶತಮಾನಗಳೇ ಕಳೆದ್ರೂ ಮಿರ್ಯಾಮಳ ನಂಬಿಗಸ್ತ ಸೇವೆಗಾಗಿ ಅವಳನ್ನ ಯೆಹೋವನು ಮರೆಯಲಿಲ್ಲ. ಅದಕ್ಕಾಗಿ ಪ್ರವಾದಿ ಮೀಕನ ಮೂಲಕ ತನ್ನ ಜನರಿಗೆ ಹೀಗೆ ಹೇಳಿದನು: “ನಾನು ನಿನ್ನನ್ನು ಐಗುಪ್ತದೇಶದೊಳಗಿಂದ ಪಾರುಮಾಡಿ ದಾಸತ್ವದಿಂದ ಬಿಡಿಸಿದೆನು; ಮೋಶೆಯನ್ನೂ ಆರೋನನನ್ನೂ ಮಿರ್‌ಯಾಮಳನ್ನೂ ನಿನಗೆ ನಾಯಕರನ್ನಾಗಿ ಕಳುಹಿಸಿದೆನು.”—ಮೀಕ 6:4.

ಯೆಹೋವ ದೇವರು ಅವಳಿಗೆ ಶಿಸ್ತು ಕೊಟ್ಟಾಗ ದೀನತೆಯಿಂದ ಒಪ್ಪಿಕೊಳ್ಳೋಕೆ ಅವಳ ನಂಬಿಕೆ ಸಹಾಯ ಮಾಡ್ತು

ಮಿರ್ಯಾಮಳಿಂದ ನಾವು ತುಂಬ ಪಾಠ ಕಲಿಬಹುದು. ಚಿಕ್ಕ ಹುಡುಗಿಯಾಗಿದ್ರು ಅವಳು ಅಸಹಾಯಕರಿಗೆ ಸಂರಕ್ಷಣೆ ಕೊಟ್ಟಳು, ಸರಿಯಾದ ವಿಷ್ಯನ ಧೈರ್ಯದಿಂದ ಮಾತಾಡಿದಳು. (ಯಾಕೋಬ 1:27) ಅವಳ ತರ ನಾವು ಕೂಡ ದೇವರು ಹೇಳಿದ ಸಂದೇಶನ ಸಂತೋಷದಿಂದ ಸಾರಬೇಕು. (ರೋಮನ್ನರಿಗೆ 10:15) ಹೊಟ್ಟೆಕಿಚ್ಚು ಮತ್ತು ಕಹಿಭಾವನೆಯ ವಿಷದ ಬೀಜ ನಮ್ಮಲ್ಲಿ ಮೊಳಕೆಯೊಡೆಯದ ಹಾಗೆ ನೋಡ್ಕೊಬೇಕು. (ಜ್ಞಾನೋಕ್ತಿ 14:30) ಯೆಹೋವನು ಶಿಸ್ತನ್ನ ಕೊಟ್ಟಾಗ ದೀನತೆಯಿಂದ ಸ್ವೀಕರಿಸಬೇಕು. (ಇಬ್ರಿಯ 12:5) ಹೀಗೆ ಮಾಡಿದ್ರೆ ನಾವು ನಮ್ಮ ಜೀವನದಲ್ಲಿ ಮಿರ್ಯಾಮಳ ನಂಬಿಕೆನ ಅನುಕರಿಸಬಹುದು.

^ ಪ್ಯಾರ. 28 ಚಿಪ್ಪೋರಳ ವಿಷ್ಯದಲ್ಲಿ “ಕೂಷ್‌ ದೇಶದವಳು” ಅನ್ನೋ ಪದ ಬೇರೆ ಮಿದ್ಯಾನ್ಯರ ಹಾಗೆ ಅವಳು ಅರೇಬಿಯ ಸ್ತ್ರೀ ಅನ್ನೋದನ್ನ ಸೂಚಿಸುತ್ತೆ ಹೊರತು ಇಥಿಯೋಪಿಯದವಳು ಅಂತಲ್ಲ.

^ ಪ್ಯಾರ. 35 ಮೂವರು ಕೂಡ ಅವರ ವಯಸ್ಸಿನ ಪ್ರಕಾರ ಒಬ್ಬರಾದ ಮೇಲೊಬ್ಬರು ಸತ್ತರು. ಮೊದಲು ಮಿರ್ಯಾಮ್‌, ಆಮೇಲೆ ಆರೋನ, ಕೊನೆಯಲ್ಲಿ ಮೋಶೆ. ಇವ್ರೆಲ್ಲರೂ ಸುಮಾರು ಒಂದು ವರ್ಷದೊಳಗೆ ತೀರಿಹೋದರು.