ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ

ಕೆಲಸ ತರದಿರಲಿ ಬಾಳಲ್ಲಿ ವಿರಸ

ಕೆಲಸ ತರದಿರಲಿ ಬಾಳಲ್ಲಿ ವಿರಸ

 ಇದು ಟೆಕ್ನಾಲಜಿ ಯುಗ. ಹಾಗಾಗಿ ನಿಮ್ಮ ಬಾಸ್‌, ಜೊತೆಯಲ್ಲಿ ಕೆಲಸ ಮಾಡೋರು, ಕ್ಲೈಂಟ್ಸ್‌ ನೀವು 24/7 ಕೆಲಸ ಮಾಡಲಿಕ್ಕೆ ರೆಡಿ ಇರಬೇಕು ಅಂತ ನೆನಸಬಹುದು. ಇದ್ರಿಂದ ಕೆಲಸನ ಮರೆತು ಜೀವನ ಮಾಡೋದು ಕಷ್ಟ. ಜೀವನದಲ್ಲಿ ನೀವು ತುಂಬ ಬೆಲೆ ಕೊಡಬೇಕಾದ ವಿಷ್ಯಕ್ಕೂ ಗಮನ ಕೊಡಲಿಕ್ಕೆ ಆಗಲ್ಲ. ಗಂಡ/ಹೆಂಡತಿಗೆ ಸಮಯ ಕೊಡಲಿಕ್ಕೂ ಆಗಲಿಕ್ಕಿಲ್ಲ.

 ನಿಮಗಿದು ಗೊತ್ತಿರಲಿ

  •   ಟೆಕ್ನಾಲಜಿ ನಿಮ್ಮ ಸಂಸಾರಕ್ಕೆ ಮುಳ್ಳಾಗಬಹುದು. ಕೆಲಸ ಮುಗಿಸಿ ಮನೆಗೆ ಬಂದ ಮೇಲೂ ಆಫೀಸಿಂದ ಫೋನ್‌ ಮೇಲೆ ಫೋನ್‌, ಮೆಸೆಜ್‌ ಮೇಲೆ ಮೆಸೆಜ್‌, ಇದು ಸಾಲದು ಅಂತ ಇ-ಮೇಲ್‌ಗಳು ಬರುತ್ತಾ ಇರುತ್ತೆ. ಇದೆಲ್ಲ ನೋಡಿ ಮುಗಿಸೋ ಅಷ್ಟರಲ್ಲಿ ಸಂಗಾತಿ ಜೊತೆ ಕಳೆಯೋಕೆ ಸಮಯನೇ ಇರಲ್ಲ. ಇದನ್ನ ನೀವು ಹೀಗೇ ಬಿಡಬಾರದು, ಏನಾದ್ರೂ ಮಾಡಬೇಕು.

     “ಕೆಲಸದಿಂದ ಮನೆಗೆ ಬಂದ ಮೇಲೂ ಆಫಿಸಿಂದ ಫೋನ್‌, ಇ-ಮೇಲ್‌ಗಳು ಬರ್ತಾ ಇರುತ್ತೆ. ನನ್ನ ಗಮನ ಎಲ್ಲ ಅದ್ರ ಮೇಲೇ ಇರುತ್ತೆ. ಗಂಡನಿಗೆ ಟೈಮ್‌ ಕೊಡಲಿಕ್ಕೇ ಆಗ್ತಿಲ್ಲ. ಅವರ ಜೊತೆ ಕೂತು ಮಾತಾಡೋದು ದೂರದ ಮಾತಾಗಿದೆ.”—ಜ್ಯಾನೆಟ್‌.

  •   ಕೆಲಸಕ್ಕೆ ಕೊಡಬೇಕಾಗಿರೋ ಸಮಯ ಕೆಲಸಕ್ಕೆ, ಕುಟುಂಬಕ್ಕೆ ಕೊಡಬೇಕಾಗಿರೋ ಸಮಯ ಕುಟುಂಬಕ್ಕೆ ಕೊಡಿ. ಇದಕ್ಕೆ ನೀವೇ ಹೆಜ್ಜೆ ತಗೊಳ್ಳಿ. ಇಲ್ಲಾಂದ್ರೆ ಬಾಳ ಸಂಗಾತಿಯ ಜೊತೆ ಕಳೆಯಬೇಕಾಗಿರೋ ಟೈಮೆಲ್ಲ ಕೆಲಸದಲ್ಲೇ ಕಳೆದುಹೋಗುತ್ತೆ.

     “ಕೆಲಸ ಅಂತ ಬಂದ್ರೆ ‘ಮೊದ್ಲು ಇದನ್ನ ಮುಗಿಸಿಬಿಡೋಣ, ಆಮೇಲೆ ಅವರನ್ನ ನೋಡ್ಕೊಳೋಣ. ಅವ್ರಿಗೆ ಅರ್ಥ ಆಗುತ್ತೆ, ಏನೂ ಬೇಜಾರು ಮಾಡ್ಕೊಳ್ಳಲ್ಲ’ ಅಂತ ನೆನಸಿ ನಾನು ಮೊದ್ಲು ಉದಾಸೀನ ಮಾಡೋದು ನನ್‌ ಗಂಡನನ್ನೇ.”—ಹೋಲಿ.

 ಕೆಲಸ ಮತ್ತು ಕುಟುಂಬವನ್ನು ಬ್ಯಾಲೆನ್ಸ್‌ ಮಾಡಿ

  •   ಬಾಳ ಸಂಗಾತಿನೇ ಮುಖ್ಯ ಅಂತ ಹೇಳಿ. “ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು” ಎನ್ನುತ್ತದೆ ಬೈಬಲ್‌. (ಮತ್ತಾಯ 19:6, ಸತ್ಯವೇದವು) ಮೂರನೇ ವ್ಯಕ್ತಿ ಮಧ್ಯೆ ಬಂದು ನಿಮ್ಮಿಬ್ರನ್ನ “ಅಗಲಿಸಲಿಕ್ಕೆ” ಅಂದ್ರೆ ಬೇರೆ ಮಾಡಲಿಕ್ಕೆ ನೀವು ಬಿಡಲ್ಲ ಅಲ್ವಾ? ಹಾಗಾದ್ರೆ ಕೆಲಸ ನಿಮ್ಮನ್ನ ಬೇರೆ ಮಾಡಲಿಕ್ಕೆ ಯಾಕೆ ಬಿಡ್ತೀರಾ? ಹಾಗೆ ಮಾಡಬೇಡಿ.

     “‘ಕೇಳಿದಷ್ಟು ದುಡ್ಡು ಕೊಡಲ್ವಾ? ನಮಗೆ ಬೇಕಿದ್ದಾಗ ನಮ್ಮ ಕೆಲ್ಸ ಮಾಡ್ಕೊಡಬೇಕು, ಅದು ಅವರ ಡ್ಯೂಟಿ’ ಅಂತ ಕೆಲವು ಕ್ಲೈಂಟ್ಸ್‌ ನೆನಸ್ತಾರೆ. ಆದ್ರೆ ’ರಜೆಯಲ್ಲಿರುವಾಗ ನಾನು ಸಿಗಲ್ಲ, ಆದಷ್ಟು ಬೇಗ ನಿಮ್ಮನ್ನ ಕಾಂಟ್ಯಾಕ್ಟ್‌ ಮಾಡ್ತೇನೆ‘ ಅಂತ ಅವ್ರಿಗೆ ಹೇಳಿಬಿಡ್ತೀನಿ. ಏಕೆಂದ್ರೆ ಕೆಲ್ಸಕ್ಕಿಂತ ನನಗೆ ನನ್ನ ಹೆಂಡ್ತಿನೇ ಮುಖ್ಯ.”—ಮಾರ್ಕ್‌.

    ಹೀಗೆ ಕೇಳ್ಕೊಳ್ಳಿ, “ನೀವು ಏನು ಮಾಡ್ತಿರೋ ಅದು ’ನನ್ನ ಕೆಲ್ಸಕ್ಕಿಂತ ನನ್ನ ಗಂಡ/ಹೆಂಡ್ತಿನೇ ಮುಖ್ಯ‘ ಅಂತ ತೋರಿಸುತ್ತಾ?”

  •   ಯಾವಾಗ ಆಗಲ್ವೋ ಆಗ ಆಗಲ್ಲ ಅಂತ ಹೇಳಿ. “ವಿನಮ್ರರ ಹತ್ರ ವಿವೇಕ ಇರುತ್ತೆ” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 11:2) ನೀವು ವಿನಮ್ರರಾಗಿದ್ರೆ ಕೆಲವು ಕೆಲಸ ಮಾಡಲಿಕ್ಕೆ ನಿಮ್ಮಿಂದ ಆಗಲ್ಲ ಎಂದು ಹೇಳ್ತೀರ ಅಥವಾ ಅದನ್ನ ಬೇರೆಯವ್ರಿಗೆ ಒಪ್ಪಿಸ್ತೀರ.

     “ನಾನು ಪ್ಲಂಬಿಂಗ್‌ ಕೆಲ್ಸ ಮಾಡ್ತೀನಿ. ಕೆಲವೊಮ್ಮೆ ಎಮರ್ಜೆನ್ಸಿ ಅಂತ ಯಾರಾದ್ರೂ ದಿಢೀರಂತ ನನ್ನನ್ನ ಕರಿತಾರೆ. ಅವರ ಸಮಯಕ್ಕೆ ನನಗೆ ಹೋಗಲಿಕ್ಕೆ ಆಗಲ್ಲ ಅಂದ್ರೆ ಅವರ ಟೆನ್‌ಶನ್‌ ಇನ್ನೂ ಜಾಸ್ತಿ ಆಗುತ್ತೆ. ಅದಕ್ಕೇ ನಾನು ಅವರಿಗೆ ಬೇರೆ ಪ್ಲಂಬರ್‌ ಅಡ್ರೆಸ್‌ ಕೊಡ್ತೀನಿ.”—ಕ್ರಿಸ್ಟಫರ್‌.

     ಹೀಗೆ ಕೇಳ್ಕೊಳ್ಳಿ, ‘ಒಂದುವೇಳೆ ನಾನು ಎಕ್ಸ್‌ಟ್ರ ಕೆಲ್ಸ ಮಾಡಿದ್ರೆ ನನ್ನ ಗಂಡ/ಹೆಂಡ್ತಿ ಏನ್‌ ನೆನಸಬಹುದು? ನಾನು ಅವನಿಗೆ ಬೆಲೆ ಕೊಡ್ತಿಲ್ಲ ಅಂತ ನೆನಸಬಹುದಾ? ಇದರ ಬಗ್ಗೆ ನನ್ನ ಗಂಡ/ಹೆಂಡ್ತಿ ಏನು ಹೇಳ್ತಾಳೆ?’

  •   ಒಟ್ಟಿಗೆ ಸಮಯ ಕಳೆಯಿರಿ. “ಪ್ರತಿಯೊಂದಕ್ಕೂ ಒಂದು ಸಮಯ ಇದೆ” ಎನ್ನುತ್ತದೆ ಬೈಬಲ್‌. (ಪ್ರಸಂಗಿ 3:1) ನೀವು ಯಾವಾಗ ಕೆಲಸದಲ್ಲಿ ತುಂಬ ಬ್ಯೂಸಿ಼ ಇರುತ್ತಿರೋ ಆಗ ನಿಮ್ಮ ಸಂಗಾತಿ ಜೊತೆ ಸಮಯ ಕಳೆಯೋಕೆ ಪ್ಲಾನ್‌ ಮಾಡಬೇಕು. ಬರೀ ಪ್ಲಾನ್‌ ಮಾಡಿದ್ರೆ ಸಾಕಾಗಲ್ಲ, ಅದೇ ತರ ಮಾಡಬೇಕು.

     “ಎಲ್ಲ ಕೆಲ್ಸ ಒಂದೇ ಸಲ ತಲೆ ಮೇಲೆ ಬರುವಾಗ್ಲೂ ಒಟ್ಟಿಗೆ ಸಮಯ ಕಳೆಯೋಕೆ ಟೈಮ್‌ ಫಿಕ್ಸ್‌ ಮಾಡ್ತಿವಿ. ಇಬ್ರೂ ಸೇರಿ ಊಟ ಮಾಡಲಿಕ್ಕೆ ಅಥವಾ ಬೀಚ್‌ಲ್ಲಿ ನಡಿಯೋಕ್ಕಾದ್ರೂ ಟೈಮ್‌ ಮಾಡ್ಕೊಳ್ತಿವಿ.”—ಡೆಬೋರ.

     ಹೀಗೆ ಕೇಳ್ಕೊಳ್ಳಿ, ‘ಬೇರೆ ಕೆಲಸನೆಲ್ಲ ಪಕ್ಕಕ್ಕಿಟ್ಟು ನನ್ನ ಸಂಗಾತಿಗೆ ಮಾತ್ರ ಟೈಮ್‌ ಕೊಡೋಕೆ ನಾನು ಪ್ಲಾನ್‌ ಮಾಡಿದ್ದೀನಾ? ಇದ್ರ ಬಗ್ಗೆ ನನ್ನ ಸಂಗಾತಿ ಜೊತೆ ಮಾತಾಡಿದ್ರೆ ಅವಳು ಏನು ಹೇಳಬಹುದು?’

  •   ಎಲೆಕ್ಟ್ರಾನಿಕ್‌ ಗ್ಯಾಡ್ಜೆಟ್ಸ್‌ ಆಫ್‌ ಮಾಡಿ. ‘ಉತ್ತಮ ಕಾರ್ಯಗಳು ಯಾವವೆಂದು ನೀವು ವಿವೇಚಿಸಿ ತಿಳಿದುಕೊಳ್ಳಿ’ ಎನ್ನುತ್ತದೆ ಬೈಬಲ್‌. (ಫಿಲಿಪ್ಪಿ 1:10) ನಿಮ್ಮ ಸಂಗಾತಿ ಜೊತೆ ಸಮಯ ಕಳೆಯುವಾಗ ಕೆಲಸದ ಸ್ಥಳದಿಂದ ಕಾಲ್‌ ಅಥವಾ ಮೆಸೆಜ್‌ ಬರ್ತಿದ್ರೆ ನಿಮ್ಮ ಗಮನ ಅದರ ಕಡೆ ಹೋಗಬಹುದು. ಹಾಗಾಗಿ ಆ ಸಮಯದಲ್ಲಿ ನಿಮ್ಮ ಎಲೆಕ್ಟ್ರಾನಿಕ್‌ ಗ್ಯಾಡ್ಜೆಟ್‌ಗಳನ್ನ ಆಫ್‌ ಮಾಡಿ ಇಡಿ.

     “ಕೆಲ್ಸಕ್ಕೆ ಇಷ್ಟು ಅಂತ ಸಮಯ ಇಡ್ತೀನಿ. ಆದಾದ್ಮೇಲೆ ಕೆಲ್ಸಕ್ಕೆ ಸಂಬಂಧಪಟ್ಟ ಯಾವುದನ್ನೂ ನೋಡಲ್ಲ ಅಂತ ನಿರ್ಧಾರ ಮಾಡ್ತೀನಿ. ಫೋನ್‌ನ ಕೂಡ ಸೈಲೆಂಟಲ್ಲಿ ಇಡ್ತೀನಿ.”—ಜೆರಿಮಿ.

     ಹೀಗೆ ಕೇಳ್ಕೊಳ್ಳಿ, ‘ಬಾಸ್‌ ಅಥವಾ ಕ್ಲೈಂಟ್‌ ಫೋನ್‌ ಮಾಡಬಹುದು ಅಂತ ನೆನಸಿ ಯಾವಾಗಲೂ ಫೋನ್‌ನ ಆನ್‌ನಲ್ಲಿ ಇಡ್ತೇನಾ? ಇದರ ಬಗ್ಗೆ ನನ್ನ ಗಂಡ/ಹೆಂಡ್ತಿ ಏನು ಹೇಳ್ತಾಳೆ?’

  •   ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೊಳ್ಳಿ. “ನಿಮ್ಮ ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ.” (ಫಿಲಿಪ್ಪಿ 4:5) ನಿಮ್ಮ ಜೊತೆ ಕಳೆಯಬೇಕಾದ ಸಮಯದಲ್ಲಿ ಕೆಲವೊಮ್ಮೆ ನಿಮ್ಮ ಸಂಗಾತಿ ಕೆಲಸ ಮಾಡಬೇಕಾಗಿ ಬರಬಹುದು. ಉದಾಹರಣೆಗೆ, ಕೆಲಸದ ಸಮಯ ಆದ ಮೇಲೂ ನಿಮ್ಮ ಸಂಗಾತಿ ಕೆಲಸಕ್ಕೆ ಗಮನ ಕೊಡಬೇಕಾಗುತ್ತೆ. ಏಕೆಂದ್ರೆ ಅವರ ಕೆಲಸ ಅಂಥದ್ದು, ಏನೂ ಮಾಡಲಿಕ್ಕೆ ಆಗಲ್ಲ. ಹಾಗಾಗಿ ನೀವು ಹೇಳಿದ್ದೇ ಆಗಬೇಕು ಅಂತ ನೆನಸದೆ ಅಡ್ಜೆಸ್ಟ್‌ ಮಾಡ್ಕೊಳ್ಳಿ.

     “ನನ್ನ ಯಜಮಾನ್ರು ಚಿಕ್ಕ ಬಿಸಿನೆಸ್‌ ಮಾಡ್ತಾರೆ. ಕೆಲಸದ ಸಮಯ ಆದ ಮೇಲೂ ಆವಾಗವಾಗ ಏನಾದ್ರೂ ಎಮರ್ಜೆನ್ಸಿ ಕೆಲಸ ಬರ್ತಿರುತ್ತೆ. ಇದನ್ನ ನೋಡಿ ಕೆಲವೊಮ್ಮ ನನಗೆ ಕೋಪ ಬರುತ್ತೆ. ಆದ್ರೂ ನಾವಿಬ್ರು ಒಟ್ಟಿಗೆ ಸಮಯ ಕಳಿಲಿಕ್ಕೆ ಯಾವುದೂ ಅಡ್ಡಿ ಆಗದೇ ಇರೋ ತರ ನೋಡ್ಕೊಳ್ತೀವಿ.”—ಬಿವೆರ್ಲಿ.

     ಹೀಗೆ ಕೇಳ್ಕೊಳ್ಳಿ, ‘ತುಂಬ ಕೆಲ್ಸ ಇದ್ದಾಗ ನನ್ನ ಜೊತೆ ಸಮ್ಯ ಕಳಿಲಿಕ್ಕೆ ಕೆಲವೊಮ್ಮೆ ನನ್ನವ್ರಿಗೆ ಆಗಲ್ಲ. ಅಂಥ ಸಮ್ಯದಲ್ಲಿ ನಾನು ಅವರನ್ನ ಅರ್ಥಮಾಡಿಕೊಳ್ತೀನಾ? ಇದರ ಬಗ್ಗೆ ನನ್ನ ಗಂಡ/ಹೆಂಡ್ತಿ ಏನು ಹೇಳ್ತಾಳೆ?’

 ಹೀಗೆ ಯೋಚಿಸಿ

 ಮೊದಲು ಒಬ್ಬೊಬ್ಬರೇ ಈ ಪ್ರಶ್ನೆಗಳಿಗೆ ಉತ್ತರ ಏನು ಅಂತ ಯೋಚಿಸಿ. ಆಮೇಲೆ ಇಬ್ಬರೂ ಸೇರಿ ಚರ್ಚೆ ಮಾಡಿ.

  •   ‘ಮನೆಗೆ ಬಂದ ಮೇಲೂ ನಿಮಗೆ ಆಫೀಸ್‌ ಕೆಲ್ಸ ಇದ್ದದ್ದೇ’ ಅಂತ ನಿಮ್ಮ ಗಂಡ/ಹೆಂಡತಿ ಗೊಣಗುತ್ತಾರಾ? ಅದು ನಿಜನಾ?

  •   ಕೆಲ್ಸಕ್ಕೂ ಮೋಸ ಮಾಡಬಾರದು, ಕುಟುಂಬದವರ ಜೊತೆನೂ ಖುಷಿಯಾಗಿ ಇರಬೇಕು ಅಂದ್ರೆ ನೀವು ಏನೇನು ಮಾಡಬೇಕು ಅಂತ ಯೋಚನೆ ಮಾಡಿದ್ದೀರಾ?

  •   ‘ಎಷ್ಟು ಹೇಳಿದ್ರೂ ನೀವು ಮನೆಗೆ ಬಂದ ಮೇಲೆ ಆಫೀಸ್‌ ಕೆಲ್ಸ ಮಾಡೋದನ್ನ ಬಿಡಲ್ಲ’ ಅಂತ ನಿಮ್ಮ ಬಗ್ಗೆ ನಿಮ್ಮ ಗಂಡ/ಹೆಂಡತಿ ಹೇಳ್ತಾರಾ? ಯಾವಾಗ ಆ ತರ ಹೇಳಿದ್ದಾರೆ ಅಂತ ನೆನಪು ಮಾಡ್ಕೊಳ್ಳಿ.

  •   ಈ ವಿಷ್ಯದಲ್ಲಿ ನಿಮ್ಮ ಗಂಡ/ಹೆಂಡತಿ ಯಾವ ಬದಲಾವಣೆ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ನಿಮಗೆ ಅನಿಸುತ್ತೆ?